ಗೌತಮ್‌ನ ಸಾಧನೆ ಗಗನದೆತ್ತ

ಈತ ಪಕ್ಕಾ ಗ್ರಾಮೀಣ ಪ್ರತಿಭೆ. ಎಳೆ ಪ್ರಾಯದಲ್ಲಿ ಭವಿಷ್ಯದಲ್ಲಿ ನಾನೊಬ್ಬ ಸ್ವಿಮ್ಮರ್ ಆಗುತ್ತೇನೆ ಎಂಬ ಕನಸೂ ಕಂಡಿರಲಿಕ್ಕಿಲ್ಲ. ಬಾಲ್ಯದಲ್ಲಿ ಹಾಗೆ ಸುಮ್ಮನೆ ಕಾಲ ಕಳೆಯಲೆಂದು ಈಜುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದ. ಈತನ ಆಸೆಯನ್ನು ಗಮನಿಸಿ ಪೋಷಕರು ಇನ್ನಷ್ಟು ಪ್ರೋತ್ಸಾಹ ಹಾಗೂ ತರಭೇತಿ ನೀಡಿದರೆ ಹೇಗೆ ಎನ್ನುವ ಯೋಚನೆಯಲ್ಲಿ ತೊಡಗಿದರು. ಮೊದಲೇ ಸ್ವಿಮ್ಮಿಂಗ್ ವಲಯ ಪರಿಚಯವಿದ್ದ ಈತನ ತಂದೆ ತರಭೇತಿ ನೀಡಲು ಅಣಿಯಾದರು. ಮೊದ ಮೊದಲು ತಂದೆಯ ಗರಡಿಯಲ್ಲೇ ಪಳಗಿದ ಈ ಪ್ರತಿಭೆ ಇಂದು ರಾಜ್ಯ ಮಟ್ಟದ ಪ್ರತಿಭಾವಂತ ಈಜುಗಾರನಾಗಿ ರೂಪುಗೊಂಡಿದ್ದಾನೆ. ಅಂದ ಹಾಗೆ ಈತನ ಹೆಸರು ಗೌತಮ್.

           ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರಿನ ಪುರಂದರ ಮತ್ತು ಹೇಮಾಮಾಲಿನಿ ದಂಪತಿಯ ಪುತ್ರನಾದ ಗೌತಮ್ ತನ್ನ ಐದನೇ ವಯಸ್ಸಿಗೆ ಸ್ವಿಮ್ಮಿಂಗ್ ಕಲಿಕೆ ಆರಂಭಿಸಿದ. ಪ್ರತಿದಿನವೂ ಬಿಡುವಿನ ವೇಳೆ ಸಿಕ್ಕಾಗ ಸಮಯ ವ್ಯರ್ಥಮಾಡದೇ ತಂದೆಯಿಂದ ಕೋಚಿಂಗ್ ಪಡೆಯುತ್ತಿದ್ದ.

        ತಾನು ಭಾಗವಹಿಸಿದ ಮೊದಲ ತಾಲೂಕು ಮಟ್ಟದ ಈಜು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕ ಜಯಿಸಿ ತನ್ನ ಪಯಣಕ್ಕೆ ಆರಂಭವನ್ನಿಟ್ಟ. ಈಜು ತರಬೇತುದಾರ ವಸಂತ್ ಕುಮಾರ್ ಅವರಿಂದ ಸುದೀರ್ಘ ಹತ್ತು ವರ್ಷಗಳ ಕಾಲ ಅಚ್ಚುಕಟ್ಟಾದ ತರಭೇತಿಯಲ್ಲಿ ಗೌತಮ್ ಪಳಗಿರುತ್ತಾನೆ.

ಸಾಧನೆಯ ಶಿಖರವನ್ನೇರಿ:

           ಹೌದು, ಗೌತಮ್ ತನ್ನ ಸ್ವಿಮ್ಮಿಂಗ್ ಪಯಣ ಪ್ರಾರಂಭಿಸಿದ್ದು ತನ್ನ ಊರಿನ ಪುತ್ತೂರು ಬಾಲವನ ಈಜು ಕೊಳದಲ್ಲಿ. ೨೦೦೩ ರಲ್ಲಿ ಇಲ್ಲಿ ನಡೆದ ೨೫ ಮೀಟರ್ ಪ್ರೀ ಸ್ಟೈಲ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದ. ೪*೫೦ ಪ್ರೀ ಸ್ಟೈಲ್ ರಿಲೇಯಲ್ಲಿ ತೃತೀಯ ಸ್ಥಾನದೊಡನೆ ೨೫ ಮೀಟರ್ ಬ್ಯಾಕ್ ಸ್ಟೈಲ್ ರಿಲೇ ಮತ್ತು ೫೦ ಮೀಟರ್ ಪ್ರೀ ಸ್ಟೈಲ್ ರಿಲೇಯಲ್ಲಿ ದ್ವಿತೀಯ ಸ್ಥಾನವನ್ನು ಬಾಚಿ ಒಟ್ಟು ಎರಡು ಬೆಳ್ಳಿ ಮತ್ತು ಒಂದು ಕಂಚು ಪದಕವನ್ನು ತೆಕ್ಕೆಗೆ ಹಾಕಿದ.

         ಅಂತೆಯೇ ೨೦೦೪ ರಲ್ಲಿ ವಿಟ್ಲದ ಕೋಟಿಕೆರೆಯಲ್ಲಿ ನಡೆದ ೨೫ ಮೀಟರ್ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟ. ೨೦೦೫ನೇ ಇಸವಿಯಲ್ಲೂ ಈತನ ಪ್ರದರ್ಶನ ಗಮನಾರ್ಹವಾಗಿತ್ತು. ಪುತ್ತೂರಿನ ಬಾಲವನ ಈಜುಕೊಳದಲ್ಲಿ ನಡೆದ ೪*೫೦ ಪ್ರೀ ಸ್ಟೈಲ್ ರಿಲೇಯಲ್ಲಿ ತೃತೀಯ, ೫೦ ಮೀಟರ್ ಬ್ಯಾಕ್ ಸ್ಟೈಲ್ ಈಜುವಿನಲ್ಲಿ ತೃತೀಯ, ೨೫ ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ದ್ವಿತೀಯ ಸೇರಿದಂತೆ ಒಟ್ಟು ಮೂರು ಕಂಚಿನ ಪದಕವನ್ನು ಬಾಚಿದನು.

          ಕಾರಣಾಂತರಗಳಿಂದ ಎರಡು ವರ್ಷಗಳ ಕಾಲ ಸ್ವಿಮ್ಮಿಂಗ್‌ಗೆ ಬ್ರೇಕ್ ಹಾಕಿದ ಗೌತಮ್ ೨೦೦೯ ರಲ್ಲಿ ಪುನಃ ಕಮ್‌ಬ್ಯಾಕ್ ಆದ. ಇದೇ ವರ್ಷ ಬೆಂಗಳೂರಿನ ಕೆ.ಸಿ ರೆಡ್ಡಿ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ೨೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್ ಈಜಿನಲ್ಲಿ ತೃತೀಯ, ೧೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನ ದೊರಕಿತು. ಇಷ್ಟೇ ಅಲ್ಲದೆ ಜಿಲ್ಲಾ ಮಟ್ಟದಲ್ಲೂ ತನ್ನ ಕಮಾಲ್ ಪ್ರದರ್ಶಿಸಿದ ಈತ ಮಂಗಳೂರಿನಲ್ಲಿ ನಡೆದ ೧೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ವಿಮ್ಮಿಂಗ್‌ನಲ್ಲಿ ಪ್ರಥಮ, ೫೦ ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಪ್ರಥಮ, ೪*೧೦೦ ಮೀಟರ್ ಪ್ರೀ ಸ್ಟೈಲ್‌ನಲ್ಲಿ ದ್ವಿತೀಯ ಸೇರಿದಂತೆ ಬರೋಬ್ಬರಿ ಎರಡು ಚಿನ್ನ, ಬೆಳ್ಳಿ ಮತ್ತು ಕಂಚು ಪದಕದ ವಿಜೇತನೀತ.

         ಈತನ ಪ್ರತಿಭಾ ಹೂರಣ ಇಷ್ಟಕ್ಕೇ ಮುಗಿಯುತು ಅಂದುಕೊಂಡಿರಾ..? ಖಂಡಿತಾ ಇಲ್ಲ ೨೦೧೦ ರಲ್ಲೂ ಪದಕಗಳ ಸರಮಾಲೆಯನ್ನೇ ಪಡೆದ ಪ್ರತಿಭಾನ್ವಿತ ಈತ. ಪುತ್ತೂರಿನಲ್ಲಿ ನಡೆದ ೧೦೦ ಮೀಟರ್, ೫೦ ಮತ್ತು ೨೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್ ಈಜಿನಲ್ಲಿ ಬೆಳ್ಳಿಯ ಪದಕಕ್ಕೆ ಗುರಿಯಿಟ್ಟ. ಇದೇ ವರ್ಷ ಮಂಗಳೂರಿನಲ್ಲಿ ನಡೆದ ಇಂಟರ್ ಡಿಸ್ಟ್ರಿಕ್ಟ್ ಲೆವೆಲ್ ಸ್ಪರ್ಧೆಯಲ್ಲಿ ೧೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ವಿಮ್ಮಿಂಗ್‌ನಲ್ಲಿ ಚಿನ್ನದ ಪದಕ, ೫೦ ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಜೊತೆಗೆ  ಮೀಟರ್ ಭಟರ್ ಪ್ಲೈ ಸ್ಟ್ರೋಕ್‌ನಲ್ಲಿ ಬೆಳ್ಳಿಯ ಪದಕ ಪಡೆದನು.

          ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ೪*೧೦೦ ಮೀಟರ್ ಪ್ರೀ ಸ್ಟೈಲ್ ರಿಲೇ ಮತ್ತು ಮಿಡಲ್ ರಿಲೇಯಲ್ಲಿ ಬೆಳ್ಳಿ ಪದಕ ಈತನಿಗೊಲಿಯಿತು.

’ಸ್ವಿಮ್ಮಿಂಗ್ ಕ್ರೀಡೆ ಮೈಗೂಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ನಿರಂತರವಾದ ಕಠಿಣ ಅಭ್ಯಾಸ ನಡೆಸಬೇಕು. ನನ್ನ ಈ ಕ್ರೀಡಾಸಕ್ತಿಯನ್ನು ಇನ್ನಷ್ಟು ಎತ್ತರಕ್ಕೇರಿಸಿದ್ದು ಹೆತ್ತವರೂ ಹಾಗೂ ನನ್ನ ಗುರುಗಳು’ ಎನ್ನುವುದು ಗೌತಮ್‌ನ ಮನದಾಳದ ಮಾತು.

        ೨೦೧೧ ಕೂಡಾ ಈತನ ಪಾಲಿಗೆ ಶುಭ ಸಂಕೇತವಾಗಿತ್ತು ಎಂಬುವುದಕ್ಕೆ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ೧೦೦ ಮತ್ತು ೨೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಚಿನ್ನದ ಪದಕ ಅಲ್ಲದೆ ೪*೧೦೦ ಪ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ ಈತನ ಕೊರಳಿಗೊಲೊದಿದೆ.

          ಪ್ರಸ್ತುತ ಪಾರ್ಥ ಅವರಿಂದ ಈಜು ತರಭೇತಿ ಪಡೆಯುತ್ತಿರುವ ಗೌತಮ್ ೨೦೧೨ರ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಮೂರು ಚಿನ್ನದ ಪದಕ ಮತ್ತು ರಾಜ್ಯ ಮಟ್ಟದಲ್ಲಿ ಒಂದು ಚಿನ್ನದ ಪದಕಗಳಿಗೆ ಭಾಜನನಾದ. ಈತನ ಸ್ವಿಮ್ಮಿಂಗ್ ಸಾಧನೆಯನ್ನು ಗಮನಿಸಿದ ಅನೇಕ ಹಿರಿಯ ಕ್ರೀಡಾಪಟುಗಳು ಪ್ರಶಂಸಿದ ಉದಾಹರಣೆಗಳಿದೆ.

          ಪ್ರಸ್ತುತ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿ.ಯು.ಸಿ ಕಲಿಯುತ್ತಿರುವ ಗೌತಮ್ ಭವಿಷ್ಯದಲ್ಲಿ ಬಿ.ಇ, ಎಮ್.ಟೆಕ್ ಮಾಡುವ ಹಂಬಲವಂತೆ. ಜತೆಗೆ ಸ್ವಿಮ್ಮಿಂಗ್ ಕ್ಷೇತ್ರದಲ್ಲೂ ಶ್ರೇಷ್ಠ ಸಾಧನೆ ಮಾಡಬೇಕೆಂದಿರುವ ಈತನ ಕನಸು ನನಸಾಗಲೆಂದು ಹಾರೈಸೋಣ.

                                                                                                   ಇತೀ ತಮ್ಮ ವಿಶ್ವಾಸಿ,

                                                                                                   ನವೀನ್ ಭಟ್,ಇಳಂತಿಲ

                                                                                            ವಿವೇಕಾನಂದ ಕಾಲೇಜು ಪುತ್ತೂರು

                                                                                            ಮೊಬೈಲ್ ನಂ-೯೮೪೪೬೩೮೫೪೫

Comments

Popular posts from this blog