ಅಯನಾಳ ಕಲಾಪಯಣ

           ಈ ಪುಟಾಣಿ ಸಾಮಾನ್ಯಳಂತವಳಲ್ಲ. ಏಕಕಾಲದಲ್ಲಿ ಎರಡೂ ಕೈಯಿಂದ ಬೇರೆ ಬೇರೆ ತಾಳಗಳನ್ನು ಹಾಕುತ್ತಾ, ಒಂದು ಕಣ್ಣಿನ ಹುಬ್ಬನ್ನು ಹಾರಿಸುತ್ತಾ (ರೇಚಿತ), ೬೦ ಸಂವತ್ಸರಗಳ ಹೆಸರನ್ನು ಪಟಪಟನೆ ಹೇಳುವ ಚತುರಳೀಕೆ. ಅಷ್ಟೇಕೆ ೭೨ ಮೇಳಕರ್ತ ರಾಗಗಳ ಹೆಸರುಗಳನ್ನು, ರಾಗಚಕ್ರ, ಮೇಳ ಸಂಖ್ಯೆ, ಆರೋಹಣ-ಅವರೋಹಣ ಸ್ವರಗಳನ್ನು ನಿಖರವಾಗಿ ಹೇಳಬಲ್ಲಳು. ಅಲ್ಲದೆ ಸಂವತ್ಸರಗಳು, ನಕ್ಷತ್ರ. ಮಾಸ, ತಿಥಿಗಳ ಹೆಸರು ಹಾಗೂ ಭಗವದ್ಗೀತೆ, ನಾಟ್ಯಶಾಸ್ತ್ರ-ಅಭಿನಯ ದರ್ಪಣದ ಆಯ್ದ ಶ್ಲೋಕಗಳನ್ನು, ಸ್ತೋತ್ರ-ಸೂಕ್ತಗಳನ್ನು ನಿರರ್ಗಳವಾಗಿ ಹೇಳಬಲ್ಲ ಈ ಚತುರೆಯ ಹೆಸರು ಆಯನಾ.

          ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಸಿಸುವ ಈಕೆ  ಭಾರತೀಯ ಕಲೆಗಳ ತರಬೇತಿ ಕೇಂದ್ರ ರಂಗಭಾರತಿಯ ನಿರ್ದೇಶಕ ಕೆ.ವಿ.ರಮಣ್ ಮತ್ತು ಉಪನ್ಯಾಸಕಿ ಮುಕಾಂಬಿಕಾ ದಂಪತಿಯ ಪುತ್ರಿ. ಸಾಹಿತ್ಯ ಕ್ಷೇತ್ರ ಈಕೆಯನ್ನು ಬಾಲ್ಯದಲ್ಲೇ ಕೈ ಹಿಡಿದಿದೆ. ಕನ್ನಡ ಸಾಹಿತ್ಯ ಪರಂಪರೆಯ ನೂರ ಎಪ್ಪತ್ತೈದು ಪ್ರಾತಿನಿಧಿಕ ಹೆಸರುಗಳನ್ನು ನಿರರ್ಗಳವಾಗಿ ಹೇಳಬಲ್ಲ ವಿಶೇಷ ಜ್ಞಾಪಕ ಶಕ್ತಿ ಇವಳಿಗಿದ್ದು ನೂರ ಹನ್ನೊಂದು ದೈವಗಳ ಹೆಸರುಗಳನ್ನೂ ನುಡಿಯಬಲ್ಲಳು. ದಾಸರ ಪದಗಳನ್ನು, ದೇಶಭಕ್ತಿಗೀತೆಗಳನ್ನು ಈಕೆಯ ಬಾಯಲ್ಲಿ ಕೇಳುವುದೇ ಸೊಬಗು.

          ನೃತ್ಯ ಕ್ಷೇತ್ರ ಈಕೆಯನ್ನು ಚಿಕ್ಕಂದಿನಿಂದಲೇ ಕೈ ಹಿಡಿಯಿತು. ವಿದುಷಿ ಶ್ರೀಮತಿ ಗೀತಾ ಸರಳಾಯ ಮತ್ತು ವಿದುಷಿ ಶ್ರೀಮತಿ ರಶ್ಮೀ ಚಿದಾನಂದ್‌ರಲ್ಲಿ ನೃತ್ಯಾಭ್ಯಾಸ ಮಾಡುತಿರುವ ಈಕೆ ಬೆಂಗಳೂರಿನ ವಿದ್ವಾನ್ ಸತ್ಯನಾರಾಯಣ ರಾಜು ಅವರಲ್ಲಿ ವಿಶೇಷ ನೃತ್ಯ ತರಬೇತಿ ಪಡೆಯುತ್ತಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾಷಣ, ಕಂಠಪಾಠ, ಪಠಣ, ನಾಟಕ, ಸುಗಮ ಸಂಗೀತ, ಜ್ಞಾಪಕ ಶಕ್ತಿ, ನಿರೂಪಣ, ಯಕ್ಷಗಾನ ಇತ್ಯಾದಿಗಳಲ್ಲಿ ತಂದೆಯೇ ಇವಳಿಗೆ ಗುರು ಎಂಬುದು ಗಮನಾರ್ಹ.

ವೇದಿಕೆಯಲ್ಲಿ ಮೈಕ್ ಹಿಡಿದು ಹಾಡಬೇಕೆಂದರೂ ಓ.ಕೆ ಎನ್ನುವ ಅಯನಾಳ ಶಾಸ್ತ್ರೀಯ ಸಂಗೀತದ ಗುರು ವಿದ್ವಾನ್ ಎಂ. ನಾರಾಯಣ್. ಶ್ರೀ ಗಜಾನನ ಮರಾಠೆ ಅವರಲ್ಲಿ ಕೀಬೋರ್ಡ್ ಕಲಿಕೆ. ಮಂಗಳೂರಿನ ರಂಗಭಾರತಿ ಸಂಸ್ಥೆಯ ಮೂಲಕ ಮನೆಮನೆಗೆ ಭರತನಾಟ್ಯ ಎಂಬ ಕಾನ್ಸೆಷ್ಟ್‌ನಡಿ ಇತಿಹಾಸದಲ್ಲಿ ಮೊದಲ ಬಾರಿಗೆ ಮನೆಮನೆಗಳಲ್ಲಿ ಭರತನಾಟ್ಯ ಸರಣಿ ನೀಡಿರುವ ಖ್ಯಾತಿ ಅಯನಾಳದು. ಕಥಕ್ ನೃತ್ಯದೆಡೆಗೆ ಈಕೆಗೆ ಒಲವು ಜಾಸ್ತಿ. ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ನೃತ್ಯ ಕಲಾವಿದ ಕೋಲ್ಕತ್ತದ ಪಂಡಿತ್ ಆಶಿಮ್ ಬಂಧು ಭಟ್ಟಾಚಾರ್‍ಯಜೀ ಅವರ ತಂಡದ ಜತೆ ಮುಡಬಿದಿರೆಯ ಆಳ್ವಾಸ್ ವಿರಾಸತ್‌ನಲ್ಲಿ ನೀಡಿದ ಪ್ರದರ್ಶನ ಎಂದೂ ಮರೆಯಲಾಗದ ಸನ್ನಿವೇಷ ಎನ್ನುವುದು ಅಯನಾಳ ಮನದಾಳದ ಮಾತು.

ಪ್ರಶಸ್ತಿಗಳ ಸರಮಾಲೆ:  ಸಾಹಿತ್ಯ ರಂಗದಲ್ಲಿ ಗುರುತಿಸುವಂತಹಾ ಸಾಧನೆ ಮಾಡಿರುವ ಅಯನಾಳಿಗೆ ೨೦೧೧ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕನ್ನಡ ಮಕ್ಕಳ ಸಾಂಸ್ಕೃತಿಕ ಮಿಲನ-೨೦೧೧ರ ನಿಮಿತ್ತ ಮುಂಬೈ ಕರ್ನಾಟಕ ಸಂಘ ಮತ್ತು ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಟ್ರಸ್ಟ್‌ಗಳ ನಾಟ್ಯಮಯೂರಿ ಎಂಬ ಬಿರುದು ನೀಡಿ ಗೌರವಿಸಿದೆ. ವಿಶ್ವಕನ್ನಡ ಸಮ್ಮೇಳನದ ಜಿಲ್ಲಾ ತೇರಿನ ಯಾತ್ರೆಯಲ್ಲಿ ಮೂಡಬಿದ್ರೆಯ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರಿಂದ ಆಶೀರ್ವಾದ ಪೂರ್ವಕವಾಗಿ ವಿದೇಶೀ ಪೆನ್ನಿನ ಇನಾಮು ಪಡೆದಿದ್ದಾಳೆ.

        ಇದಲ್ಲದೆ ೨ನೇಯ ಅಖಿಲ ಕರ್ನಾಟಕ ಬೆಳದಿಂಗಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಬಾಲಪ್ರತಿಭಾ ರತ್ನ ಸಮ್ಮಾನ ಪ್ರಶಸ್ತಿ, ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಕೊಡಮಾಡುವ ಅರಳುಮಲ್ಲಿಗೆ ರಾಜ್ಯಮಟ್ಟದ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರಾವಳಿ ಸಂಭ್ರಮ ಪುರಸ್ಕಾರ, ಸುನಿನಾದಶ್ರೀ ಪ್ರಶಸ್ತಿ, ಸುಮಸೌರಭ ಪ್ರಶಸ್ತಿ, ಸೇರಿದಂತೆ ನೂರಾರು ಗೌರವಗಳು ಈಕೆಯನ್ನು ಅರಸುತ್ತಾ ಬಂದಿದೆ.

           ಮಂಗಳೂರಿನ ಬಾಲಭಾರತಿ ಅಕಾಡೆಮಿಯ ಮಕ್ಕಳಕೂಟದ ಸ್ಥಾಪಕ ಉಪಾಧ್ಯಕ್ಷೆಯಾಗಿರುವ ಅಯನಾಳು ತನ್ನಂತೆಯೇ ಇತರ ಮಕ್ಕಳಿಗೂ ವೇದಿಕೆ ಕಲ್ಪಿಸುವಲ್ಲಿ ಕೈ ಜೋಡಿಸಿದ್ದಾಳೆ.

ಪ್ರತಿಭಾ ಹೊನಲು: ರಂಗಭಾರತಿ ಸಂಸ್ಥೆ ನಡೆಸಿದ ಸಂಗೀತ ನೃತ್ಯ ಸಪ್ತಾಹ ಮತ್ತು ಕನ್ನಡ ಸಂಸ್ಕೃತಿ ಸಪ್ತಾಹಗಳಲ್ಲಿ ನಿರಂತರ ೨ ವರ್ಷಗಳ ಕಾಲ ವಿವಿಧ ಅನಾಥಾಶ್ರಮ, ವೃದ್ಧಾಶ್ರಮ, ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ಕೇಂದ್ರ, ಕಾರಾಗ್ರಹ ಮುಂತಾದ ಕಡೆಗಳಲ್ಲಿ ಉಚಿತವಾಗಿ ಕಾರ್ಯಕ್ರಮ ನೀಡಿದ ಹಿರಿಮೆ ಈಕೆಯದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಗಳಲ್ಲಿ ಪ್ರದರ್ಶನ ನೀಡಿರುವಳು.

           ಬೆಂಗಳೂರಿನಲ್ಲಿ ನಡೆದ ೭೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮೈಸೂರಿನ ರಾಮೋತ್ಸವದಲ್ಲಿ, ೨೦೧೦ ಮತ್ತು ೨೦೧೧ ಆಳ್ವಾಸ್ ನುಡಿಸಿರಿ ಸಮಾರಂಭ, ಮುಂಬೈ ಮಹಾನಗರದ ವಿವಿಧ ಪ್ರದೇಶಗಳಲ್ಲಿ, ಚೆನೈ, ಸೇರಿದಂತೆ ರಾಷ್ಟ್ರಾದ್ಯಂತ ಈಕೆ ನೀಡಿದ ಪ್ರದರ್ಶನ ಅಸಂಖ್ಯ.

          ಕಲಾ ವಲಯದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಈಕೆ ಮೂಡುಬಿದರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಐದನೇ ತರಗತಿ ವಿದ್ಯಾರ್ಥಿನಿ.

                            ಇತೀ ತಮ್ಮ ವಿಶ್ವಾಸಿ,

                           ನವೀನ್ ಭಟ್,ಇಳಂತಿಲ

                      ವಿವೇಕಾನಂದ ಕಾಲೇಜು ಪುತ್ತೂರು 

                     ಮೊಬೈಲ್ ನಂ: 9844638545

Comments

Popular posts from this blog