ಒಮ್ಮೆ ಬನ್ನಿ 'ದೇವರಗುಂಡಿಗೆ'

        ಸುತ್ತಲೂ ಕಾನನ. ಸುಮಾರು ಅರ್ಧ ಕಿಲೋ ಮೀಟರ್ ಹಿಂದೆಯೇ ನೀರಿನ ಜುಳು

ಜುಳು ನಾದದ ದನಿ. ಕುತೂಹಲದಿಂದ ಹಾಗೆಯೇ ಕಾಲಳತೆಯ ದೂರ ಕ್ರಮಿಸಿದರೆ ಮನದಲ್ಲಿ ಜುಂ..! ಆಗುವುದಂತೂ ಖಂಡಿತ. ಏಕಂತೀರಾ ಸುಮಾರು ೧೦ ರಿಂದ ೧೫ ಅಡಿ ಎತ್ತರದಿಂದ ಬೀಳುವ ನೀರಿನ ಜಲಧಾರೆ. ಅಂದ ಹಾಗೆ ಇದು ದೇವರಗುಂಡಿ ಜಲಪಪಾತದ ಸೊಬಗು. 
ಈ ಜಲಪಾತವಿರುವುದು ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿನಾಡ ಭಾಗದಲ್ಲಿ. ಸುಳ್ಯ ಪಟ್ಟಣದಿಂದ ಮಡಿಕೇರಿ ಮಾರ್ಗವಾಗಿ ಸುಮಾರು ಹನ್ನೊಂದು ಕಿಲೋಮೀಟರ್ ಸಾಗಿದರೆ ಅರಂತೋಡು ಎಂಬ ಪುಟ್ಟ ಪಟ್ಟಣ ಸಿಗುತ್ತದೆ. ಇಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ ಕೇವಲ ಆರು ಕಿಲೋ ಮೀಟರ್ ತೊಡಿಕ್ಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ.
 ದೇವಾಲಯದ ದರುಷನ ಮಾಡಿ ಇದೇ ರಸ್ತೆಯಲ್ಲೇ ಹದಿನೈದು ನಿಮಿಷ ಕಾಲ್ನಡಿಗೆಯಲ್ಲೇ ಹೋದರೆ  ’ಅಮೆ ಮನೆ’ ಎಂಬ ಮನೆ ಸಿಗುತ್ತದೆ. ಇಲ್ಲಿಂದ ಅಡಿಕೆ ಹಾಗೂ ಏಲಕ್ಕಿ ತೋಟದಲ್ಲಿ ಸಾಗಿದರೆ ಕೇವಲ ಐದೇ ನಿಮಿಷದಲ್ಲಿ ದೇವರಗುಂಡಿ  ಜಲಧಾರೆಯ ನರ್ತನವನ್ನು ಕಣ್ಣಾರೆ ಸವಿಯಲು ಸಾಧ್ಯ.
ಈ ಜಲಪಾತಕ್ಕೆ ಪೌರಾಣಿಕ ಇತಿಹಾಸದ ಹಿನ್ನಲೆಯೂ ಇದೆ. ಇಲ್ಲೇ ಸಮೀಪದ ತೊಡಿಕ್ಕಾನ ದೇವಸ್ಥಾನದ ಮೂಲಸ್ಥಾನವೂ ಹೌದು. ಹಿಂದೆ ಮಹಾಭಾರತ ಕಾಲದಲ್ಲಿ ಪಾಂಡವರು ಇಲ್ಲಿ ಕೆಲ ದಿನಗಳ ಕಾಲ ನೆಲೆಸಿ ಉಂಡು ಹೋಗಿದ್ದರು ಎಂಬುದು ಸ್ಥಳದ ಪ್ರತೀತಿ!

ನೀರು ಕೆಳಕ್ಕೆ ಬೀಳುವ ಪರಿ ನೋಡುಗನಿಗೆ ನಿಜಕ್ಕೂ ಸೋಜಿಗ ಮೂಡಿಸುತ್ತದೆ. ಹಾಗಂತ ನೀರಲ್ಲಿ ಮೈಯೊಡ್ಡಿ ಮೋಜು ಮಾಡುವುದಂತೂ ಅಪಾಯ! ಜಲಪಾತ ’ಸುಮಾರು ೮೦ ಅಡಿಗಿಂತಲೂ ಹೆಚ್ಚಿನ ಆಳವಿದ್ದುದರಿಂದ  ಅತ್ಯಂತ ಹೆಚ್ಚಿನ  ಜಾಗರೂಕತೆ ಅಗತ್ಯ’ ಎಂಬುದು ಸ್ಥಳೀಯರ ಹೇಳಿಕೆ.
  ತಂಪಾದ ನೀರಿನ ಮಧ್ಯೆ ಮೈ ಮರೆಯುವುದಂತೂ ಖಂಡಿತಾ..ಜಲಪಾತದ ಸುತ್ತಲೂ ಬಣ್ಣ-ಬಣ್ಣದ  ಚಿಟ್ಟೆಗಳು ನಮ್ಮನ್ನು ಮುತ್ತಿಕ್ಕುತ್ತವೆ. ಪಾಲ್ಸ್‌ನ ಸೊಬಗಿನೊಡನೆ ತಣ್ಣನೆಯ ಗಾಳಿಯ ಸ್ಪಶದ ಅನುಭವನ್ನು ಸವಿಯುವುದೇ ಸಂತಸ.
 ಇತ್ತ ಇರಲಿ ಸರ್ಕಾರದ ಚಿತ್ತ:
ದೇವರಗುಂಡಿ ಜಲಪಾತದ ವರೆಗೂ ರಸ್ತೆ ಸೌಕರ್ಯದ ಬೇಡಿಕೆ ಸ್ಥಳೀಯರದ್ದು. ಆದರೆ ಹದಗೆಟ್ಟಿರುವ ರಸ್ಥೆ ಗಮನಿಸುವಾಗ ಜನಪ್ರತಿನಿದಿಗಳ ನಿರ್ಲಕ್ಷ ಎದ್ದು ಕಾಣುತ್ತದೆ. ಸರಕಾರವು ಇತ್ತ ಸ್ವಲ್ಪ ಚಿತ್ತವಿತ್ತರೆ ರಾಜ್ಯದ ಪ್ರಮುಖ ಜಲಪಾತಗಳ ಪಟ್ಟಿಯಲ್ಲಿ ಈ ಪಾಲ್ಸ್ ಕೂಡಾ ಸೇರಬಹುದು. 

   ಸುಳ್ಯ ಪಟ್ಟಣದಿಂದ ತೊಡಿಕ್ಕಾನ ದೇವಸ್ಥಾನದೆಡೆಗೆ ಪ್ರತಿ ಗಂಟೆಗೊಂದು ಬಸ್ಸು ಸಂಪರ್ಕವಿದೆ. ಜಲಪಾತದ ವೈಭವದ ನೀರಿನ ರಮಣೀಯತೆಯನ್ನು ಸವಿಯಲು ಮಳಗಾಲವೇ ಸೂಕ್ತ ಕಾಲ. ಆದರೆ ನೀರಿನ ಪ್ರಮಾಣ ಅಧಿಕವಾಗಿರುವುದರಿಂದ ತೊಡಿಕ್ಕಾನ ಫಾಲ್ಸ್‌ನ ದೃಶ್ಯವನ್ನು ನೋಡುವುದು ತುಂಬಾ ಅಪಾಯ! ಒಕ್ಟೋಬರ್ ನಿಂದ ಫೆಬ್ರವರಿ ತಿಂಗಳಿನಲ್ಲಿ ನೀರಿನ ಹರಿವು ಕಡಿಮೆಯಿರುವುದರಿಂದ

ಜಲಪಾತವನ್ನು ಸವಿಯಲು ಇದು ಸೂಕ್ತ ಕಾಲ.
ಇದೇ ಜಲಪಾತದ ರಸ್ತೆಯಲ್ಲಿ ಏಳು ಕಿಲೋಮೀಟರ್ ಮುಂದೆ ಸಾಗಿದರೆ ’ಪಟ್ಟಿ’ ಎಂಬ ವನಶಾಸ್ತಾರ ಅಯ್ಯಪ್ಪನ ಗುಡಿಯ ದರುಷನವನ್ನೂ ಮಾಡಬಹುದು. ಅಲ್ಲದೆ ಈ ರಸ್ತೆಯ ಮೂಲಕ ಮಡಿಕೇರಿಯ 'ಭಾಗಮಂಡಲ'ವನ್ನೂ ತಲುಪಲು ಸಾಧ್ಯ. ಆದರೆ ರಸ್ತೆ ಕಿರಿದಾಗಿದ್ದು ಹಾದಿ ಬಲು ಕಷ್ಟ.
 ಪ್ರತಿ ನಿತ್ಯ ಬ್ಯುಸಿಯಾಗಿರುವ ಇಂದಿನ ಜಮಾನದಲ್ಲಿ ರಿಲೀಪ್‌ಗೆಂದು ಟ್ರಕ್ಕಿಂಗ್ ಮಾಡುವ ಪ್ಲಾನ್ ಏನಾದರೂ ಇದ್ದರೆ ಖಂಡಿತಾ ’ದೇವರಗುಂಡಿ’ ಜಲಪಾತವನ್ನು ಮರೆಯದಿರಿ.

                                                           ಇತೀ ತಮ್ಮ ವಿಶ್ವಾಸಿ,
                                                        ನವೀನ್ ಭಟ್,ಇಳಂತಿಲ
                                          ವಿವೇಕಾನಂದ ಕಾಲೇಜು ಪುತ್ತೂರು                

         ನವೀನ್ ಭಟ್.ಇಳಂತಿಲ
ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನೆಹರೂ ನಗರ ಪೋಸ್ಟ್
ಪುತ್ತೂರು ತಾಲೂಕು, ದಕ್ಷಿಣ ಕನ್ನಡ
ಮೊಬೈಲ್ ನಂ-೯೮೪೪೬೩೮೫೪೫

       
                               

Comments

Popular posts from this blog