ಕಿರುತೆರೆಯ ’ಜಾಜಿ’ ಮಲ್ಲಿಗೆ


ಕಿರುತೆರೆಯಲ್ಲಿ ಸೀರಿಯಸ್ ಆಗಿರಲಿ ಹಾಸ್ಯ ಪಾತ್ರವೇ ಆಗಿರಲಿ ಸದಾ ಅದ್ಬುತ ನಟನೆಯಿಂದ ಗಮನಸೆಳೆಯೋ ನಟಿ ಅಪೇಕ್ಷಾ. ಅಂದಹಾಗೆ ಅಪೇಕ್ಷಾ ಅಂದರೆ ಒಮ್ಮೆಲೆ ಯಾರಪ್ಪಾ ಈ ಹುಡುಗಿ ಎನ್ನಬಹುದು. ಪಾಂಡುರಂಗ ವಿಠಲ ಧಾರವಾಹಿಯ ’ಜಾಜಿ’ ಎಂದೇ ಇವರು ಮನೆಮಾತು. ಕಿರುತೆರೆಯಲ್ಲದೆ, ಹಿರಿತೆರೆ, ರಂಗಭೂಮಿಯಲ್ಲೂ ಸದ್ದು ಮಾಡಿರುವ ಅಪೇಕ್ಷಾ ಅವರು ಮಾತಿಗಿಳಿದದ್ದು ಹೀಗೆ.
ನಿಮ್ಮ ಬಾಲ್ಯದ ಬಗ್ಗೆ ಸ್ವಲ್ಪ ಹೇಳಿ?
ನಾನು ಹುಟ್ಟಿದ್ದು ಬಂಕಾಪುರದಲ್ಲಿ. ಬಾಲ್ಯದಲ್ಲಿ ರಂಗಭೂಮಿ, ಕಿರುತೆರೆ ಅಥವಾ ಹಿರಿತೆರೆಗೆ ಬರುತ್ತೇನೆಂದು ಕನಸೇ ಕಂಡಿರಲಿಲ್ಲ. ಓದಿ ಟೀಚರ್ ಆಗಬೇಕೆಂಬ ಕನಸು ನನ್ನ ಬಾಲ್ಯದಲ್ಲಿತ್ತು.
ರಂಗಭೂಮಿಯ ಬಗ್ಗೆ ಆಸಕ್ತಿ ಹುಟ್ಟಿದ್ದು ಹೇಗೆ?
ನಾನು ೯ನೇ ತರಗತಿಯಲ್ಲಿ ಕಲಿಯುತ್ತಿರುವಾಗ ಮೊದಲ ಬಾರಿಗೆ ನಾಟಕಕ್ಕೆ ಬಣ್ಣಹಚ್ಚಿದ್ದು. ಅದೂ ಶಿಕ್ಷಕರ ಒತ್ತಾಯದ ಮೇರೆಗೆ. ನಂತರ ನಾನು ಎಮ್.ಇ.ಎಸ್‌ನಲ್ಲಿ ಓದುತ್ತಿರುವಾಗ ಟೀಚರ್ ಕ್ಲಾಸ್ ಬಂಕ್ ಮಾಡ್ಸಿ ನೀನಾಸಂ ಅವರ ’ಸ್ವರಾಜ್ಯದ ಪುಟಗಳು’ ಎಂಬ ನಾಟಕಕ್ಕೆ ಕರೆದುಕೊಂಡೋಗಿದ್ದರು. ಅವತ್ತಿನಿಂದ ನಾನೂ ಕೂಡಾ ನಾಟಕಗಳನ್ನು ಮಾಡಬೇಕು ಎಂದನಿಸಿತ್ತು.
ನಾಟಕದ ಕೋರ್ಸ್ ಏನಾದರೂ ಮಾಡಿದ್ರಾ?
ಹೌದು; ಎಂ.ಇ.ಎಸ್ ರಂಗಶಾಲೆಯಲ್ಲಿ ನಾಟಕದ ಡಿಪ್ಲೊಮೋವನ್ನು ಕಲಿತೆ. ಈ ಸಮಯದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಜೊತೆಗೆ ಡೈರೆಕ್ಷನ್ ಕೂಡಾ ಮಾಡಿದ್ದುಟು. ನಂತರ ’ಅನೇಕ’ ಎಂಬ ತರಭೇತಿ ಶಾಲೆ ಸೇರಿದೆ. ಸುರೇಶ್ ಅನಗಳ್ಳಿ ಅವರ ಪ್ರೋತ್ಸಾಹ ತುಂಬಾ ಇತ್ತು. ಆಧೆ ಅಧೂರೆ, ಅಂಬೆ ಅಂಬಿಕೆ ಸೇರಿದಂತೆ ಅನೇಕ ನಾಟಕದಲ್ಲಿ ಅಭಿನಯಿಸಿದ್ದೇನೆ.
ರಂಗಭೂಮಿಯಲ್ಲಿದ್ದು ಕಿರುತೆರೆಯ ಬಗ್ಗೆ ಆಸಕ್ತಿ ಹೇಗೆ ಹುಟ್ಟಿಕೊಂಡಿತು?
ಕನಸಲ್ಲೂ ಸೀರಿಯಲ್‌ನಲ್ಲಿ ನಟಿಸಬೇಕೆಂಬ ಆಸೆ ನನ್ನಲ್ಲಿರಲಿಲ್ಲ. ನೀನಾಸಂ ಕಲಾವಿದ ದಿ.ಸುಬ್ರಹ್ಮಣ್ಯ ಅವರು ತುಂಬಾ ಒತ್ತಾಯ ಮಾಡಿದ್ರು. ಅದರಿಂದ ಈ ಕ್ಷೇತ್ರ ಆರಿಸಿದೆ. ಜಯಲಕ್ಷ್ಮೀ ಪಾಟೀಲ್ ಮತ್ತು ಸುರಭಿ ಅವರು ಮೊದಲು ನನ್ನನ್ನು ಧಾರವಾಹಿಗಳ ಅವಕಾಶದ ಬಗೆಗೆ ಪ್ರೋತ್ಸಾಹ ನೀಡಿದರು.
ಯಾವೆಲ್ಲಾ ಧಾರವಾಹಿಗಳಲ್ಲಿ ನಟಿಸಿದ್ದೀರಿ?
ನಾನು ಮೊದಲು ನಟಿಸಿದ್ದು ’ಮೌನರಾಗ’ ಎಂಬ ಧಾರವಾಹಿಯಲ್ಲಿ. ನಂತರ ಕದನ, ಮಿಂಚು, ಬದುಕು, ಗಾಜಿನಗೊಂಬೆ, ಕಾದಂಬರಿ, ಪಾಂಡುರಂಗ ವಿಠಲ, ಚಿ.ಸೌ ಸಾವಿತ್ರಿ ಸೇರಿಂದಂತೆ ಸುಮಾರು ೧೧ಕ್ಕೂ ಅಧಿಕ ಧಾರವಾಹಿಗಳಲ್ಲಿ ಅಭಿನಯಿಸಿದ್ದೇನೆ.
ಸೀರಿಯಸ್ ಪಾತ್ರ ಮಾಡುತ್ತಿದ್ದ ನೀವು ’ಪಾಂಡುರಂಗ ವಿಠಲ’ದಲ್ಲಿ ಹಾಸ್ಯ ಪಾತ್ರ ಮಾಡಿದ ಅನುಭವ?
ನಿಜವಾಗಲೂ ಒಳ್ಳೆಯ ಅನುಭವ. ಕಷ್ಟ ಎಂದೆನಿಸಲಿಲ್ಲ. ಕಾಮಿಡಿಯಿಂದ ಸೀರಿಯಸ್ ಪಾತ್ರ ಮಾಡೋದು ಸುಲಭ. ನಗಿಸೋದು ತುಂಬಾನೇ ಕಷ್ಟ. ಜಹಾಂಗೀರ್ ಅವರೊಡನೆ ಕೆಲಸ ಮಾಡಿದ್ದು ಅದ್ಬುತ ಅನುಭವ. ನಾನು ಸುರೇಶ್ ಅನಗಳ್ಳಿ ಅವರೊಡನೆ ನಾಟಕ ಕಲಿಯುತ್ತಿರುವಾಗ ಜಹಾಂಗೀರ್ ಅವರನ್ನು ನೋಡಿ ಕಲಿಯಿರಿ ಎಂದು ಸದಾ ಹೇಳುತ್ತಿದ್ದರು. ಜಹಾಂಗೀರ್ ಯಾರು? ಎಂದು ತುಂಬಾ ತಲೆ ಕಡಿಸಿದ್ದೆ. ನಾನು ಯಾವಾಗ ಅವರೊಡನೆ ಕೆಲಸ ಮಾಡಲು ಪ್ರಾರಂಭಿಸಿದೆನೋ ಆಗ ಜಹಾಂಗೀರ್ ಅವರ ಕಾರ್ಯಕ್ಷಮತೆ, ಸಮಯಪಾಲನೆಯನ್ನು ತುಂಬಾನೇ ಕಲಿತೆ.
ರಂಗಭೂಮಿ ಮತ್ತು ಕಿರುತೆರೆಯ ನಡುವೆ ನಿಮ್ಮ ಮೊದಲ ಪ್ರಾಶಸ್ತ್ಯ ಯಾವುದಕ್ಕೆ?
ನಾಟಕಕ್ಕೇ ನನ್ನ ಮೊದಲ ಪ್ರಾಶಸ್ತ್ಯ. ಈಗಲೂ ನಾನು ನಾಟಕಗಳಲ್ಲಿ ಅಭಿನಯಿಸುವುದನ್ನು ಬಿಟ್ಟಿಲ್ಲ. ನಾಟಗಳಲ್ಲಿ ಅಭಿನಯಿಸುವುದರಲ್ಲಿ ಸಿಗುವ ತೃಪ್ತಿ ಧಾರವಾಹಿಗಳಲ್ಲಿ ಖಂಡಿತಾ ಸಿಗೋದಿಲ್ಲ.
ಇಂದು ಕಿರುತೆರೆಗೆ ಕಾಲಿಡುವವರು ಅನುಭವದ ಕೊರತೆ ಅನುಭವವಿಸುತ್ತಿದ್ದಾರಾ?
ಖಂಡಿತವಾಗಿ. ಇಂದು ಕಿರುತೆರೆಗೆ ಕಾಲಿಡುವವರು ಸ್ಪಲ್ಪ ಮಟ್ಟಿಗೆ ನಟನೆಯ ಬಗೆಗೆ ತಿಳಿದುಕೊಂಡು ಬರಬೇಕಿದೆ. ಕೇವಲ ಸಣ್ಣಕಿದ್ದು, ನೋಡಲು ಸುಂದರವಾಗಿದ್ದರೆ ಸಾಲದು.
ಚಿತ್ರರಂಗದಲ್ಲಿ ಅವಕಾಶ ಸಿಕ್ಕಿಲ್ಲವೇ?
ತುಂಬಾನೇ ಅವಕಾಶಗಳು ಬರುತ್ತಿದೆ. ಈ ಹಿಂದೆ ’ಸ್ನೇಕ್ ನಾಗ’ ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಬಿ.ಸುರೇಶ್ ಅವರ ’ದೇವರನಾಡು’ ಅಲ್ಲದೆ ’ಅಷ್ಟರಲ್ಲೇ ಜಸ್ಟ್ ಮಿಸ್’ ಎಂಬ ಚಲನಚಿತ್ರದಲ್ಲಿ ನಟಿಸಿದ್ದೇನೆ.
ಮಾಡಿದ್ರೆ ಇಂತಹಾ ಪಾತ್ರ ಮಾಡಬೇಕು ಎಂಬ ಡ್ರೀಮ್ ಇದ್ಯಾ ನಿಮಗೆ?
ಪಾತ್ರ ಎಂತದ್ದೇ ಬರಲಿ, ಆದರೆ ಯಾವುದೇ ಪಾತ್ರವನ್ನಾದರೂ ನಟಿಸಲು ಉತ್ತೇಜಿಸುವಂತಹಾ ನಿರ್ದೇಶಕನೊಡನೆ ಕೆಲಸ ಮಾಡಬೇಕೆಂಬ ಆಸೆ ಇದೆ. ನಮ್ಮಲ್ಲಿರುವ ಕಲೆಯನ್ನು ಹೊರಹಾಕಿಸುವಂತಹಾ ನಿರ್ದೇಶಕರೊಡನೆ ಕೆಲಸ ಮಾಡಬೇಕು.
ಇತರೇ ಹವ್ಯಾಸ?
ನನಗೆ ನೃತ್ಯ ಎಂದರೆ ಪ್ರಾಣ. ಕಥಕ್‌ನ್ನು ಕಲಿತಿದ್ದೇನೆ. ಯಕ್ಷಗಾನವನ್ನು ಕಲಿತಿದ್ದೇನೆ. ಪ್ರೀ ಇರೋವಾಗ ಪೈಂಟಿಂಗ್ ಮಾಡುತ್ತೇನೆ. ಇದಲ್ಲದೆ ಲಲಿತಾ ಸಹಸ್ರನಾಮ, ಮನಃಶಾಸ್ತ್ರ ಮತ್ತು ಸಂಸ್ಕೃತಿ, ಮಧುಮನಿ ಪೈಂಟಿಂಗ್‌ನ ಬಗೆಗೆ ಸಂಶೋಧನೆ ಮಾಡುತ್ತಿದ್ದೇನೆ.
ಮನೆಯವರ ಪ್ರೋತ್ಸಾಹ ಹೇಗಿದೆ?
ನಮ್ಮ ಪೋಷಕರು ತುಂಬಾನೇ ಪ್ರೋತ್ಸಾಹ ನೀಡಿದ್ದಾರೆ. ನನ್ನ ಯಾವುದೇ ಆಸೆಗಳಿಗೆ ಅಡ್ಡಿ ಮಾಡೋದಿಲ್ಲ. ಜೊತೆಗೆ ಅತ್ತೆ ಮನೆಯಲ್ಲೂ ಪ್ರೋತ್ಸಾಹ ನಿಡುತ್ತಿದ್ದಾರೆ. ಗಂಡ ಅದ್ವೈತ ಗುರುಮೂರ್ತಿ ಅವರು ಸದಾ ನನ್ನ ಜೊತೆಗಿರುತ್ತಾರೆ.
                                                              ಇತೀ ತಮ್ಮ ವಿಶ್ವಾಸಿ,
                                                              ನವೀನ್ ಭಟ್,ಇಳಂತಿಲ
                                                                 ದ್ವಿತೀಯ ಎಂ.ಸಿ.ಜೆ
                                                           ಎಸ್.ಡಿ.ಎಂ ಕಾಲೇಜು ಉಜಿರೆ

Comments

Popular posts from this blog