'ವೃಂದಾ'ನ್ವೇಷಣೆ
ಶಾಸ್ತ್ರೀಯ ಕಲೆಯಾದ ಭರತನಾಟ್ಯ ಇರಲಿ, ಗಂಡುಕಲೆ ಯಕ್ಷಗಾನ ಇರಲಿ ಈಕೆಗೆ ಸಲೀಸು. ವೇದಿಕೆಯಲ್ಲಿ ಮೈಕ್ ಹಿಡಿದು ಹಾಡು ಹಾಡಬೇಕೆಂದರೂ ಸೈ ಎನ್ನುತ್ತಾಳೆ. ಅಷ್ಟೇ ಏಕೆ ಚಿತ್ರಕಲೆಯಲ್ಲೂ  ಪರಿಣತಿ. ಇದಲ್ಲದೆ ಕ್ರೀಡೆ, ಕ್ವಿಝ್ ಸ್ಪರ್ಧೆಯಲ್ಲೂ ಸಾಧನೆ. ಬಾಲ್ಯದಲ್ಲೇ ಕಲಾ ಕ್ಷೇತ್ರದತ್ತ ಅತೀವ ಒಲವಿರುವ  ಕರಾವಳಿ ಬೆಡಗಿ ವೃಂದಾ ಕೊನ್ನಾರ್.                                                 ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಬೈಕಂಪಾಡಿಯ ಬಿ. ಸುಬ್ಬ ರಾವ್ ಮತ್ತು ಶ್ರೀಮತಿ ವಿದ್ಯಾ ದಂಪತಿಯರ ಪುತ್ರಿಯಾದ ವೃಂದಾಳಿಗೆ ಯಕ್ಷಗಾನದತ್ತ ಆಸಕ್ತಿ ಬರಲು ಕಾರಣ ಈಕೆಯ ತಂದೆಗೆ ಕಲಾ ಕ್ಷೇತ್ರದ ಮೇಲಿದ್ದ ಪ್ರೀತಿ. ಅಲ್ಲದೆ ತಾವೂ ಯಕ್ಷಗಾನ ಕಲಾವಿದರಾಗಿದ್ದು ಮಗಳು ಕೂಡಾ ಈ ವಲಯದಲ್ಲಿ ಮುಂದುವರಿಯಬೇಕೆಂಬ ಹಂಬಲವಿತ್ತು.
ಈಕೆಗೆ ಹತ್ತು ವರ್ಷವಿರುವಾಗಲೇ ಯಕ್ಷಗಾನ ಕಲೆಯತ್ತ ಆಸಕ್ತಿ ಹುಟ್ಟಿತು. ಇವಳ ಆಸಕ್ತಿಗೆ ನೀರೆರೆದು ಪೋಷಿಸಿದವರೆಂದರೆ ಗುರುಗಳಾದ ಶಂಕರನಾರಾಯಣ ಮೈರ್ಪಾಡಿ ಮತ್ತು ಶಿವರಾಮ ಪಣಂಬೂರು. ಪ್ರಸ್ತುತ ರಾಕೇಶ್ ರೈ ಅಡ್ಕ ಅವರಲ್ಲಿ ಪಳಗುತ್ತಿದ್ದಾಳೆ. ವೇದಿಕೆಯ ಮೇಲೆ ಗಂಡು ಪಾತ್ರವಾಗಲಿ ಹೆಣ್ಣು ವೇಷವಾಗಲಿ ಸಲೀಸಾಗಿ ನಿರ್ವಹಿಸುವ ಚಕ್ಯತೆ ವೃಂದಾಳಿಗಿದೆ. ಬಾಲ್ಯದಲ್ಲೇ ಅನೇಕ ಯಕ್ಷಗಾನ ಪ್ರಸಂಗಕ್ಕೆ ಬಣ್ಣ ಹಚ್ಚಿದ ಅನುಭವ ಈಕೆಗಿದೆ.                                                                                  ಈಗಾಗಲೇ ದೇವಿ ಮಹಾತ್ಮೆ, ಲವಕುಶ, ಭಕ್ತ ಸುದನ್ವ, ಸುದರ್ಶನ ವಿಜಯ, ದಕ್ಷಾಧ್ವರ, ಶಶಿಪ್ರಭೆ ಸೇರಿದಂತೆ ಅನೇಕ ಪ್ರಸಂಗಕ್ಕೆ ಹೆಜ್ಜೆ ಹಾಕಿದ್ದುಂಟು. ಅಷ್ಟೇ ಅಲ್ಲದೆ ಲವಕುಶ, ಕೀಚಕ ಸೈರಂದ್ರಿ, ಅಕ್ಷಯಾಂಬರ ಎಂಬ ಇಂಗ್ಲೀಷ್ ಭಾಷೆಯ ಯಕ್ಷಗಾದಲ್ಲೂ ಮಿಂಚಿರುವಳು. 'ಮನೆಯಲ್ಲಿ ಮಾತೃಭಾಷೆ ಕನ್ನಡ ಆಗಿದ್ದು ಇಂಗ್ಲೀಷ್ ಭಾಷೆ ಕಲಿಯುವುದರಿಂದ ಪಾರ್ಥ ಮಾಡುವುದು ತುಂಬಾ ಸಲೀಸಾಯಿತು' ಎನ್ನುವ ವೃಂದಾ' ತುಳು ಭಾಷಾ ಯಕ್ಷಗಾನದಲ್ಲೂ ಗುರುತಿಸಿರುವಳು. ಶ್ರೀ ಕೃಷ್ಣ, ಲವ, ಜಾಂಬವಂತ, ಶಶಿಪ್ರಭೆ, ಪ್ರಭಾವತಿ, ಲಕ್ಷ್ಮೀ ಸೇರಿದಂತೆ ಅನೇಕ ಪಾರ್ಥಗಳನ್ನೂ ಸಲೀಸಾಗಿ ನಿರ್ವಹಿಸಿರುವಳು.                   

ಚಿತ್ರಕಲೆಯತ್ತ ಈಕೆಗೆ ಚಿಕ್ಕಂದಿನಿಂದಲೇ ಒಲವು. ಇದಕ್ಕೆ ಕಾರಣ ಈಕೆಯ ಅಜ್ಜ ಬಲರಾಮ ಭಟ್ ಚಿತ್ರಕಲೆಯಲ್ಲಿ ಪಳಗಿರುವುದು. ಪ್ರಸ್ತುತ ಉಮೇಶ್ ಎಸ್.ಕೆ ಅವರಲ್ಲಿ ಕಲಿಕೆ. ಲ್ಯಾಂಡ್ ಸ್ಕೇಪ್, ಪೆನ್ಸಿಲ್ ಸ್ಕೆಚ್, ಅಂಚೆ ಕುಂಚ, ಆಯಿಲ್ ಪೈಂಟಿಂಗ್ ಈಕೆಗೆ ನೀರುಕುಡಿದಂತೆ. ರಾಜ್ಯಾದ್ಯಂತ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಲವಾರು ಬಹುಮಾನ ಬಾಚಿರುವಳು.  ಸಂಗೀತ  ಕ್ಷೇತ್ರದತ್ತ ಈಕೆಗೆ ದೃಷ್ಟಿ ಬಿದ್ದದ್ದು ನಾಲ್ಕನೇ ತರಗತಿಯಲ್ಲಿ. ಗುರುಗಳು ವಿದುಷಿ ಅಂಬಿಕಾ. ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಹಾಡುವುದು ವೃಂದಾಳಿಗೆ ಸಲೀಸು. ತನ್ನ ಐದನೇ ವಯಸ್ಸಲ್ಲಿ ಗುರುಗಳಾದ ವಿಠಲ ಮಾಸ್ಟರ್ ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಕಲೆಯಾದ ಭರತನಾಟ್ಯವನ್ನೂ ಕಲಿತಳು.         ಕ್ಲೇ ಮಾಡಲಿಂಗ್‌ನಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಈಕೆ ಗುರುಗಳಾದ ವೆಂಕಿಪಲಿಮಾರ್ ಅವರಲ್ಲಿ ಕಲಿತು ಹಲವು ಪ್ರಥಮಗಳನ್ನು ಬಾಚಿದ್ದಾಳೆ.        ಕ್ರೀಡಾ ವಲಯದಲ್ಲಿ ತಾನ್ಯಾರಿಗೂ ಕಮ್ಮಿ ಇಲ್ಲ. ಕಬಡ್ಡಿ ಆಟದಲ್ಲಿ ಉತ್ತಮ ಕಾರ್ನರ್ ಆಟಗಾರ್ತಿಯಾಗಿ ಮಿಂಚಿದ ವೃಂದಾ ಕಳೆದ ಮೂರು ವರ್ಷದಿಂದ ಆನಂದ್ ಅವರ ಮಾರ್ಗದರ್ಶನದಲ್ಲಿ ಪಳಗುತ್ತಿದ್ದಾಳೆ. ಅಲ್ಲದೆ ಹಲವಾರು ಟೂರ್ನಿಮೆಂಟ್‌ನಲ್ಲೂ ಗಮನಾರ್ಹ ಪ್ರದರ್ಶನ  ನೀಡಿರುವಳು.  ಪ್ರಸ್ತುತ ಎನ್.ಎಮ್.ಪಿ.ಟಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ೯ ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ವೃಂದಾ ಇತರೇ ಚಟುವಟಿಕೆಗಳ ಜೊತೆಗೆ ಓದಿನಲ್ಲೂ ಸದಾ ಮುಂದೆಂಬುದು ವಿಶೇಷ.

                         ಇತೀ ತಮ್ಮ ವಿಶ್ವಾಸಿ;
                       ನವೀನ್ ಭಟ್,ಇಳಂತಿಲ
                   ಮೊಬೈಲ್: ೯೮೪೪೬೩೮೫೪೫

 





Comments

Popular posts from this blog