ಚಿನ್ನದ ಹುಡುಗಿ ಅಕ್ಷತಾ ಪೂಜಾರಿ
ಆಕೆ ತೀರಾ ಗ್ರಾಮೀಣ ಪ್ರತಿಭೆ, ಜೊತೆಗೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಈ ಬೇಗೆಯ ನಡುವೆ ಕಳೆದ ವರ್ಷ ಲಂಡನ್ ನಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಪ್ಟಿಂಗ್ ಚಾಂಪಿಯನ್‌ಷಿಪ್ ನಲ್ಲಿ ಸ್ಪರ್ದಿಸಿ, ಎಂಟು ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಿದ ಅಕ್ಷತಾ ಪೂಜಾರಿ ಇಂದು ಎಲ್ಲರ ಮನೆ ಮಾತು.
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಭೋಜ ಪೂಜಾರಿ ಮತ್ತು ಪ್ರೇಮ ಪೂಜಾರಿ ದಂಪತಿಯ ಪುತ್ರಿಯಾದ ಈಕೆಗೆ ಬಾಲ್ಯಾವಸ್ಥೆಯಲ್ಲಿಯೇ ಕ್ರೀಡಾಕ್ಷೇತ್ರದತ್ತ ಅತೀವ ಆಸಕ್ತಿ; ಮೋದಮೊದಲು ಶಾಲಾಮಟ್ಟದಲ್ಲಿ ಲಾಂಗ್‌ರೇಸ್ ಸ್ಪರ್ದೆಯಲ್ಲಿ ಮುಂಚೂಣಿಯಲ್ಲಿದ್ದ ಅಕ್ಷತಾ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಮನ್ನಣೆ ಪಡೆದಿರುವಳು.
ಅದೃಷ್ಟ ಬದಲಿಸಿದ ಕೋಚ್ ಸಲಹೆ:
ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ’ಹ್ಯಾಮರ್ ಥ್ರೋ’ ಕ್ರೀಡೆಯತ್ತ ಈಕೆಗೆ ಒಲವಿತ್ತು. ನಿಟ್ಟೆಯ ಕರುಣಾಕರ ಶೆಟ್ಟಿ ಯವರಲ್ಲಿ ತರಬೇತಿ ಪಡೆದು ಸತತ ಮೂರು ವರ್ಷ ರಾಷ್ಟ್ರಮಟ್ಟದಲ್ಲಿ ಸ್ಪರ್ದಿಸಿ ಹ್ಯಾಟ್ರಿಕ್ ಚಿನ್ನದ ಪದಕವನ್ನು ಸಂಪಾದಿಸಿದಳು. ಇದಲ್ಲದೆ ವಿಶ್ವವಿದ್ಯಾನಿಲಯ ವಲಯ,ತಾಲೂಕು,ಜಿಲ್ಲಾಮಟ್ಟದಲ್ಲೂ ಹಲವಾರು ಪದಕಗಳು ಈಕೆಯ ಕೊರಳಿಗಿದೆ.
ನಿಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪದವಿಯ ಸಂದರ್ಭದಲ್ಲಿ ಈಕೆಯ ಕ್ರೀಡಾಸಕ್ತಿಯನ್ನು ಮನವರಿತ ಕಾಲೇಜಿನ ಜಿಮ್ ತರಬೇತುದಾರರಾದ ಶ್ಯಾಮಸುಂದರ ಭಟ್ ಪವರ್ ಲಿಪ್ಟಿಂಗ್‌ನ ಸಲಹೆಯನ್ನು ನೀಡಿದರು. ಇವರು ನೀಡಿದ ಈ ಸಲಹೆ ಈಕೆಯ ಅದೃಷ್ಟವನ್ನೇ ಬದಲಿಸಿತು.
ತರಬೇತಿ ಪಡೆದ ಮೊದಲ ವರ್ಷವೇ ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪವರ್ ಲಿಪ್ಟಿಂಗ್ ಸ್ಪರ್ದೆಯಲ್ಲಿ ಸ್ಪರ್ದಿಸಿ ಚಿನ್ನದ ಪದಕ ಬೇಟೆಯಾಡಿ ತನ್ನ ಸಾಮಥ್ಯ ಪ್ರದರ್ಶಿಸಿದಳು.
ಕಾಮನ್‌ವೆಲ್ತ್ ಕ್ರೀಡೆಗೆ ಆಯ್ಕೆಯಾದ ಆ ಕ್ಷಣ.....!!!
ಆಯ್ಕೆಯಾದ ಆ ಸಂದರ್ಭದಲ್ಲಿ ನನಗಾದ ಸಂತೋಷಕ್ಕೆ ಪಾರೇ ಇಲ್ಲ.... ಸತತ ಪರಿಶ್ರಮಕ್ಕೆ ದಕ್ಕಿದ ಮನ್ನಣೆ ಇದಾಗಿದೆ ಎಂದು ಪ್ರತಿಕ್ರೀಯಿಸುವ ಅಕ್ಷತಾ ಜಮ್‌ಷೆಡ್ ಪುರ ದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡೆಯ ಪೂರ್ವಭಾವಿ ಆಯ್ಕೆಯಲ್ಲೇ ತಂಡದಲ್ಲಿದ್ದ ಆರು ಮಂದಿ ವಿದೇಶಿ ಆಟಗಾರರ ಪೈಕಿ ಅಗ್ರಸ್ಥಾನ ಸಂಪಾದಿಸಿದಳು. ಮುಂದೆ ೪೭ ಕೆ.ಜಿ ಲಿಪ್ಟಿಂಗ್ ವಿಭಾಗದಲ್ಲಿ ಎಕ್ಯೂಪ್ಡ್ ಸ್ಕ್ಯಾಟ್, ಬೆಂಚ್ ಪ್ರೆಸ್, ಡೆಡ್ ಲಿಪ್ಟ್ ವಿಭಾಗ ಹಾಗೂ ಚಾಂಫಿಯನ್‌ಷಿಪ್, ನಾನ್ ಎಕ್ಯೂಪ್ಡ್ ವಿಭಾಗ ಮತ್ತು ಓವರ್ ಲಿಪ್ಟಿಂಗ್ ಚಾಂಫಿಯನ್‌ಷಿಪ್ ನಲ್ಲಿ ಎಂಟು ಚಿನ್ನದ ಪದಕ ಬೇಟೆಯಾಡಿ ಲಂಡನ್ ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮೊಳಗಿಸಿದಳು. ಇದಲ್ಲದೆ ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ದಕ್ಷಿಣ ಭಾರತ ಪವರ್ ಲಿಪ್ಟಿಂಗ್ ಸ್ಪರ್ದೆಯಲ್ಲಿ ಚಿನ್ನದ ಪದಕ ಒಲಿದಿದೆ.
ಸಿಹಿಯೊಡನೆ ಸ್ವಲ್ಪ ಕಹಿ:
ಲಂಡನ್ ನಲ್ಲಿನ ಕಾಮನ್‌ವೆಲ್ತ್ ಕೂಟಕ್ಕೆ ಆಯ್ಕೆಯಾದರೂ ಆರ್ಥಿಕ ಪರಿಸ್ಥಿತಿ ಮಾತ್ರ ಈಕೆಯನ್ನು ಕಾಡಿತು; ಆ ಸಂದರ್ಭದಲ್ಲಿ ಹಲವು ಸಂಘ-ಸಂಸ್ಥೆ,ಕ್ರೀಡಾಭಿಮಾನಿಗಳು ಬೆಂಬಲಕ್ಕೆ ನಿಂತಿರುವುದನ್ನು ಅಕ್ಷತಾ ಸ್ಮರಿಸುತ್ತಾಳೆ.
ಆರ್ಥಿಕ ಸಮಸ್ಯೆಯ ಕಗ್ಗಂಟು ಎಷ್ಟಿತ್ತೆಂದರೆ ಪಿ.ಯು.ಸಿ ಮುಗಿಸಿ ಎರಡು ವರ್ಷ ಕಾಲ ಶಿಕ್ಷಣವನ್ನು ಸ್ಥಗಿತಗೊಳಿಸಬೇಕಾಯಿತು. ಇಂತಹಾ ಕಠಿಣ ಹಾದಿಯನ್ನು ಎದುರಿಸಿದರೂ ಕೆಚ್ಚೆದೆಯ ಪ್ರದಶನವಿತ್ತ ಅಕ್ಷತಾಳಿಗೆ ಸಲಾಂ ಹೇಳಲೇಬೇಕು.
ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ದಿನಕ್ಕೆ ೧೪ ಕಿಲೋ ಮೀಟರ್ ನಡೆದುಕೊಂಡು ಹೋಗಿ ಶಿಕ್ಷಣ ಪಡೆಯುವ ಪರಿಸ್ಥಿತಿ ನಮ್ಮ ಊರಲ್ಲಿತ್ತು;ಆ ಸಂಧರ್ಭದಲ್ಲಿ ಕ್ರಮಿಸಿದ ನಡಿಗೆಯೇ ನನ್ನ ಕ್ರೀಡಾಭಿರುಚಿಗೆ ಸಹಾಯಕ ಎನ್ನುವ ಅಕ್ಷತಾ ಸಧ್ಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಂ.ಎಚ್.ಆರ್.ಡಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದು ಪ್ರಮೋದ್ ಕುಮಾರ್ ಶೆಟ್ಟಿಯವರಲ್ಲಿ ಪಳಗುತ್ತಿದ್ದಾಳೆ.
ಆಸಕ್ತಿ ಮತ್ತು ಸಶಕ್ತ ಮಾರ್ಗದರ್ಶನವಿದ್ದರೆ ಎಂಥಹಾ ಕಠಿಣ ಹಾದಿಯನ್ನೂ ಸರಾಗವಾಗಿ ಎದುರಿಸಬಹುದು ಎಂಬುವುದಕ್ಕೆ ಚಿನ್ನದ ಹುಡುಗಿ ಅಕ್ಷತಾ ಪೂಜಾರಿ ಸ್ಪಷ್ಟ ನಿದರ್ಶನವಾಗಿ ನಿಲ್ಲುತ್ತಾಳೆ.

                                                                                                            ಇತೀ ತಮ್ಮ ವಿಶ್ವಾಸಿ ,    
                                                                                                            ನವೀನ್ ಭಟ್,ಇಳಂತಿಲ
                                                                                             ವಿವೇಕಾನಂದ ಕಾಲೇಜು ಪುತ್ತೂರು, ದ.ಕ
ವಿಳಾಸ-
  ನವೀನ್ ಭಟ್ .ಎಚ್
  ದ್ವಿತೀಯ ಪತ್ರಿಕೋದ್ಯಮ ವಿಭಾಗ
  ವಿವೇಕಾನಂದ ಕಾಲೇಜು ಪುತ್ತೂರು
   ನೆಹರೂ ನಗರ ಪೋಸ್ಟ್
   ಪುತ್ತೂರು ತಾಲೂಕು. ದ.ಕ
  ಮೊಬೈಲ್ ನಂ-೯೮೪೪೬೩೮೫೪೫

Comments

Popular posts from this blog