ಹೈಟೆಕ್ ಆಗಲಿದೆ ಬಿಎಂಟಿಸಿ
ಹೌದು .. ಬಿಎಂಟಿಸಿ ಸಂಸ್ಥೆ ಇಂದು ನಷ್ಟದಲ್ಲಿ ನಡೆಯುತ್ತಿದೆ ಎನ್ನುವಂತದ್ದು ಸತ್ಯ. ನಗರಕ್ಕೆ ನಮ್ಮ ಮೆಟ್ರೋ ರೈಲು ಕಾಲಿಟ್ಟ ಮೇಲಂತು ಅನೇಕ ಪ್ರಯಾಣಿಕರು ಮೆಟ್ರೋದ ಲಾಭ ಪಡೆಯುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸುವುದರ ಜೊತೆಗೆ ತಲುಪಬೇಕಾದ ಸ್ಥಳಕ್ಕೆ ಅತ್ಯಂತ ವೇಗವಾಗಿ ಕ್ರಮಿಸಬಹುದೆಂಬ ಉದ್ದೇಶ ಪ್ರಯಾಣಿಕರದ್ದುಘಿ. ಕಳೆದ ಕೆಲ ವರ್ಷದಿಂದ ಬಿಎಂಟಿಸಿ ತನ್ನ ನಷ್ಟವನ್ನು ಬರಿಸಲು ಏನೇ ಕಸರತ್ತು ನಡೆಸಿದರೂ ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ. ಆದರೆ ಇದೀಗ ಪ್ರಯಾಣಿಕರನ್ನು ಸೆಳೆಯುವ ವಿನೂತನನ ಯೋಜನೆಗೆ ಸಜ್ಜಾಗಿದೆ. ಬಿಎಂಟಿಸಿ ಮುಂದಿನ ದಿನಗಳಲ್ಲಿ ಏನೆಲ್ಲಾ ಯೋಜನೆಗೆ ಸನ್ನದ್ದವಾಗಿದೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಉಚಿತ ವೈಫೈ
ಇಂದಿನ ಯುಗದಲ್ಲಿ ಸ್ಮಾರ್ಟ್ ಫೋನ್ ಕಾಣದವರ ಸಂಖ್ಯೆ ವಿರಳ ಎಂದು ಹೇಳಬಹುದು. ಇಂಟರ್‍ನೆಟ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮೊಬೈಲ್ ಮೂಲಕ ಅಂತರ್ಜಾಲವನ್ನು ಬಳಸದವರು ಕಡಿಮೆ. ಮುಂದಿನ ದಿನಗಳಲ್ಲಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವೈಫೈ ಸಿಗಲಿದೆ. ಅದು ಕೂಡಾ ಉಚಿತವಾಗಿ ..!
ಹೌದು ...ಸದ್ಯದಲ್ಲೇ ಬಿಎಂಟಿಸಿ ಬಸ್ ನಿಲ್ದಾಣಗಲ್ಲಿ ಉಚಿತ ವೈಫೈ ಸೇವೆ ಒದಗಿಸಲು ಬಿಎಂಟಿಸಿ ಮುಂದಾಗಿದೆ. ನೂತನ ಯೋಜನೆಯ ಮೂಲಕ ಪ್ರಯಾಣಿಕರನ್ನು ಸೆಳೆಯುವ ತಂತ್ರ ಸಂಸ್ಥೆಯದ್ದುಘಿ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲು ತೀರ್ಮಾನ ಮಾಡಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ ಸೇರಿದಂತೆ 10 ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಉಚಿತವಾಗಿ ವೈಫೈ ನೀಡುವುದಕ್ಕೆ ಸಂಸ್ಥೆ ತೀರ್ಮಾನ ನಡೆಸಿದೆ. ಮೊದಲನೇ ಹಂತದ ಯೋಜನೆಗೆ ಶಿವಾಜಿನಗರ ಮತ್ತು ಕೆಂಪೇಗೌಡ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಆಯ್ಕೆ ಮಾಡಿದ್ದು, ಸದ್ಯದಲ್ಲೇ ಈ ಯೋಜನೆಯ ಪ್ರಯೋಜನವನ್ನು ಪ್ರಯಾಣಿಕರು ಪಡೆಯಲಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಈ ವ್ಯವಸ್ಥೆಯನ್ನು ಇನ್ನಷ್ಟು ಬಸ್ ನಿಲ್ದಾಣಕ್ಕೆ ವಿಸ್ತರಿಸುವ ಪ್ಲಾನ್ ಬಿಎಂಟಿಸಿಯದ್ದು.
ಬಿಎಂಟಿಸಿ ಬಸ್‍ಗಳಲ್ಲೂ ಉಚಿತ ವೈಫೈ
ಬಿಎಂಟಿಸಿ ಸಂಸ್ಥೆಯು ಬಸ್ಗಳ ಗುಣಮಟ್ಟವನ್ನು ಹೆಚ್ಚಿಸಲು ಮುಂದಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಬಿಎಂಟಿಸಿಯ ವೋಲ್ವೋ ಬಸ್ಗಳಲ್ಲಿ ಉಚಿತ ವೈಫೈ ಸೇವೆಗೆ ಮುಂದಾಗಿರುವುದು. ಇಂದು ಅನೇಕ ಪ್ರಯಾಣಿಕರು ಟ್ರಾಫಿಕ್ ಸಮಸ್ಯೆಗೆ ಸಿಲುಕುತ್ತಿದ್ದು ಹಲವರಿಗೆ ತನ್ನ ಕಚೇರಿಯ ಜೊತೆ ತಕ್ಷಣದ ಸಂವಹನಕ್ಕೆ ಸಾಧ್ಯವಾಗದೇ ಇರಬಹುದು. ಈ ನಿಟ್ಟಿನಲ್ಲಿ ಬಿಎಂಟಿಸಿಯ ಈ ನಿರ್ಧಾರ ಸ್ವಾಗತಾರ್ಹ ಎನ್ನುತ್ತಿದ್ದಾರೆ ಪ್ರಯಾಣಿಕರು. ಈ ಸೌಲಭ್ಯಗಳ ಲಾಭವನ್ನು ಸುಮಾರು 200ಕ್ಕೂ ಅಧಿಕ ವೋಲ್ವೋಬಸ್ಗಳು ಪಡೆಯಲಿದೆ. ಈ ವಿಚಾರದ ಕುರಿತು ಬಿಎಂಟಿಸಿ ಪ್ರತ್ಯೇಕವಾಗಿ ಟೆಂಡರ್ ಕರೆಯಲು ಮುಂದಾಗಿದೆ.
ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಸಂಕೀರ್ಣ
ಒಂದೇ ಸೂರಿನಡಿ ಪ್ರಯಾಣಿಕರಿಗೆ ಸಂಪೂರ್ಣ ಸೇವೆ ನೀಡುವ ಉದ್ದೇಶದಿಂದ ನಗರದ ಶಾಂತಿನಗರ, ಕೆಂಗೇರಿ ಸೇರಿದಂತೆ ಅನೇಕ ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಬಿಎಂಟಿಸಿ ತೀರ್ಮಾನ ಮಾಡುತ್ತಿದೆ.
ಬಸ್ ನಿಲ್ದಾಣಕ್ಕೆ ಅಗಮಿಸುವ ಪ್ರಯಾಣಿಕರಿಗೆ ದಿನ ಬಳಕೆಯ ವಸ್ತು ಸೇರಿದಂತೆ ಹಲವು ಸೌಲಭ್ಯಗಳು ಕಾಲಳತೆಯ ದೂರದಲ್ಲಿ ನೀಡಬೇಕು ಎಂಬ ಉದ್ಧೇಶ ಬಿಎಂಟಿಸಿಯದ್ದುಘಿ. ಬ್ಯಾಡ್ಮಿಂಟನ್ ಕೋರ್ಟ್, ಜಿಮ್, ಮಲ್ಟಿಪ್ಲೆಕ್ಸ್, ಟ್ಯುಟೋರಿಯಲ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒಂದೇ ಸಂಕೀರ್ಣದಲ್ಲಿ ಒದಗಿಸಲು ತೀರ್ಮಾನ ನಡೆಸುತ್ತಿದೆ. ಇದಕ್ಕೆಂದು ಟೆಂಡರ್ ಕೆರೆದಿದ್ದು, ಮುಂದಿನ ದಿನಗಳಿಂದ ಜಾರಿಗೆ ಬರಲಿದೆ.
ಒಟ್ಟಿನಲ್ಲಿ ಹೇಳುವುದಾದರೆ ಮುಂದಿನ ದಿನಗಳಲ್ಲಿ ಬಿಎಂಟಿಸಿ ಅಧಿಕಾರಿಗಳು ನಷ್ಟವನ್ನು ಭರಿಸಲು ಅನೇಕ ತಂತ್ರಗಳನ್ನು ಜಾರಿಗೆತರುತ್ತಿದೆ. ಮುಂದಿನ ದಿನಗಳಲ್ಲಿ ಇದರ ಸಂಪೂರ್ಣ ಲಾಭವನ್ನು ಪ್ರಯಾಣಿಕರು ಅನುಭವಿಸಲಿದ್ದಾರೆ.




Comments
Post a Comment