ಯುವ ಪ್ರತಿಭೆಯ ಗಾಯನ  ಸಿಂಚನ

ಇವರು ಪ್ರಬುದ್ದ ಕಂಠದ ಹಾಡುಗಾರ್ತಿ. ತನ್ನ ಹಾಡಿನ ಮುಖೇನವೇ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸುವ ಪ್ರತಿಭೆ. ವೇದಿಕೆಯ ಎದುರು ಅದೆಷ್ಟೇ ಪ್ರೇಕ್ಷಕರಿದ್ದರೂ ನಿರ್ಭೀತಳಾಗಿ ಹಾಡುವ ಚಕ್ಯತೆ. ಅಂದ ಹಾಗೆ ಈ ಗಾನಸುದಾಮಣಿಯ ಹೆಸರು ಸಿಂಚನ್ ದೀಕ್ಷಿತ್.
ಊರು ಉದ್ಯಾನನಗರಿ ಬೆಂಗಳೂರು. ಬಾಲ್ಯದಲ್ಲಿ ಸಂಗೀತದತ್ತ ತುಸು ಜಾಸ್ತಿ ಒಲವು. ಇದಕ್ಕೂ ಕಾರಣವಿದೆ, ಸೋದರತ್ತೆ ನಿರ್ಮಲಾ ಕುಲಕರ್ಣಿ ಪ್ರಬುದ್ದ ಗಾಯಕರು. ಅಲ್ಲದೆ ಮುತ್ತಜ್ಜ ಕೃಷ್ಣಮೂರ್ತಿ ಪುರಾಣಿಕ್ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದವರು. ತುಂಬು ಕುಟುಂಬದಲ್ಲಿ ಬೆಳೆದ ಸಿಂಚನ್‌ರಿಗೆ ಸಹಜವಾಗಿಯೇ ಸಂಗೀತ ಬೆನ್ನು ಹತ್ತಿತು.
ಬಾಲ್ಯದಿಂದಲೇ ಗೀತಾ ಹೆಗ್ಡೆ ಅವರ ಬಳಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಹೆಚ್ಚಿನ ಕಲಿಕೆಗಾಗಿ ಹೊಂಬಾಳೆ ಪ್ರತಿಭಾ ರಂಗವನ್ನು ಸೇರಿಕೊಂಡರು. ಇಲ್ಲಿ ಎಚ್. ಫಲ್ಗುಣ ಅವರು ಸುಗಮ ಸಂಗೀತಕ್ಕೆ ತಳಹದಿಯನ್ನು ಕಲಿಸಿಕೊಟ್ಟರು. ಇಲ್ಲಿಂದ ವೇದಿಕೆಯಲ್ಲಿ ಮೈಕ್ ಹಿಡಿದು ನಾನೂ ಹಾಡಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತಂತೆ.
ರಿಯಾಲಿಟಿಯ ’ರಿಯಲ್’ ಟಚ್:
ಈ ಟಿ.ವಿ ಕನ್ನಡದಲ್ಲಿ ಪ್ರಸಾರವಾಗಿತ್ತಿದ್ದ ’ಎದೆ ತುಂಬಿ ಹಾಡಿವೆನು’ ಎಂಬ ರಿಯಾಲಿಟೀ ಶೋ ಮುಖೇನ ಪರಿಚಿತರಾದ ಸಿಂಚನ್‌ರಿಗೆ ಮುಂದಿನ ದಿನದಲ್ಲಿ ಮುಟ್ಟಿದ್ದೆಲ್ಲಾ ಚಿನ್ನ..! ತನ್ನ ಮೊದಲ ಹಾಡಿನಲ್ಲೇ ೧೦೦ ಅಂಕ ಗಿಟ್ಟಿಸಿಕೊಂಡ ಇವರು, ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಸಂಗೀತ ಕ್ಷೇತ್ರದ ಹಲವು ವಿಚಾರವನ್ನು ಕಲಿತರಂತೆ. ಈ ಷೋಗೆ ಬಂದ ಸಂಗೀತ ದಿಗ್ಗಜ ಹಂಸಲೇಖ ಅವರು ಇವರ ಹಾಡನ್ನು ಕೇಳಿ ’ಇವಳು ಕರ್ನಾಟಕಕ್ಕೆ ಬಂದ ಪ್ರಶಸ್ತಿ’ ಎಂದು ಹೇಳಿ ಹೊಗಳಿದ್ದುಂಟು. ಇಷ್ಟಲ್ಲದೆ ಗುಣಗಾನ, ಐಡಿಯಾ ಸ್ಟಾರ್ ಸಿಂಗರ್, ನೂರೊಂದು ನೆನಪು, ಸಪ್ತಸ್ವರ-೩ ಸೇರಿದಂತೆ ಅನೇಕ ಕನ್ನಡ ರಿಯಾಲಿಟೀ ಷೋದಲ್ಲಿನ ಪರಿಚಿತ ಪ್ರತಿಭೆ ಇವರು.
ಸಿಂಚನ್ ದೀಕ್ಷಿತ್ ಅವರು ಹಿಂದಿ ಮಾದ್ಯಮದಲ್ಲೂ ಸಾಕಷ್ಟು ಹೆಸರು ಮಾಡಿದವರು. ಜೀ ಟಿ.ವಿಯಲ್ಲಿ ಮತ್ತು ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿದ್ದ  ಚಲ್ತೀ ಕಾ ನಾಮ್-ಅಂತ್ಯಾಕ್ಷರಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು; ಮುಂದೆ ಇಂಡಿಯನ್ ಐಡಲ್-೧೪ ಷೋದಲ್ಲಿ ಸ್ಪರ್ಧಿಸಿ ಪೈನಲ್ ಹಂತ ತಲುಪಿದ್ದರು. ಜೀ ಟಿ.ವಿಯವರು ದುಬೈಯಲ್ಲಿ ಆಯೋಜಿಸಿದ ಸ.ರಿ.ಗ.ಮ.ಪ ಸಂಗೀತ ಸಮರದಲ್ಲೂ ಸ್ಪರ್ಧಿಸಿ ಕರ್ನಾಟಕದ ಕೀರ್ತಿ ಮೆರೆದಿದ್ದಾರೆ.

ಕನ್ನಡದಲ್ಲೂ ಕಮಾಲ್:
ಹೌದು, ಸಿಂಚನಾರಿಗೆ ಇಂದು ಗಾಯನ ಎಂದರೆ ನೀರು ಕುಡಿದಷ್ಟು ಸಲೀಸು. ಮೊದಲ ಬಾರಿ ಕನ್ನಡ ಇಂಡಸ್ಟ್ರೀಯಲ್ಲಿ ಅವಕಾಶ ಸಿಕ್ಕಿದ್ದು ’ಒಂದು ಪ್ರೀತಿಯ ಕಥೆ’ ಚಲನಚಿತ್ರಕ್ಕೆ. ಈ ಚಿತ್ರದಲ್ಲಿ ಸಿಂಚನಾ ಹಾಡಿದ ಹಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು ವಿಶೇಷ. ನಂತರದ ದಿನದಲ್ಲಿ ಮನಸುಗಳ ಮಾತು ಮಧುರ, ಕಿಂಗ್‌ಫಿಷರ್, ಎನ್.ಎಚ್ ೧, ಭೂಗತ, ಕೆಂಚ, ಭಾನಾಮತಿ, ಎದ್ದೇಳು ಮಂಜುನಾಥ, ಬಿಡ್ಡ, ಯೋಗಿ, ಯಕ್ಷ, ಮಿಂಚು, ವಾರಸ್ದಾರ, ವೀರ ಮದಕರಿ ಸೇರಿದಂತೆ ಅನೇಕ ಚಿತ್ರಕ್ಕೆ  ಹಾಡುವ ಸುಯೋಗ ಒದಗಿ ಬಂತು.
ಹಿಂದಿಯಲ್ಲೂ ಖದರ್
ಒಂದು ಕನ್ನಡದ ಹುಡುಗಿ ಹಿಂದಿ ಇಂಡಸ್ಟ್ರೀಯಲ್ಲಿ ನೆಲೆ ಊರುವುದೆಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ಇವರು ಅದಕ್ಕೆ ತದ್ವಿರುದ್ದ. ಇಂದ್ರಜಿತ್ ಲಂಕೇಶ್ ನಿರ್ದೇಶನದ ’ಶಾದೀಕೆ ಆಪ್ಟರ್ ಎಫೆಕ್ಟ್’ ಚಲನಚಿತ್ರದಲ್ಲಿ ಬ್ಯಾಕಿಂಗ್ ಮೋರಲ್ಸ್ ಹಾಡಿರುವರು. ಅಲ್ಲದೆ ’ಮಿಲೇ ಸಮ್‌ಹೌ’ ಚಲನಚಿತ್ರದಲ್ಲಿನ ಎರಡು ಹಾಡಿಗೆ ಇವರದ್ದೇ ವಾಯ್ಸ್. ಸಧ್ಯ ಇವರು ಹಾಡಿದ ’ದಿಲ್ ರಮ್ತಾ ಜೋಗಿ’ ಚಲನಚಿತ್ರ ಬಿಡುಗಡೆಯ ಹಂತದಲ್ಲಿದೆ. ’ಜಷ್ನ್ ಕಾ’ ಎಂಬ ಹಿಂದಿ ಆಲ್ಬಮ್‌ಗೆ ವೋಕಲ್ಸ್ ಹಾಡಿರುವುದರ ಜೊತೆಗೆ ’ವೋ ಪಾಂಚ್ ದಿನ್’ ಎಂಬ ಆಲ್ಬಮ್ ಇನ್ನು ಬಿಡುಗಡೆಗೆಯಾಗಬೇಕಿದೆ. ಮುಂದಿನ ದಿನದಲ್ಲಿ ಕನ್ನಡ ಆಲ್ಬಮ್ ಮಾಡಬೇಕೆಂಬ ಆಸೆ ಸಿಂಚನ್‌ರಿಗಿದೆ.
ಕೇವಲ ಚಲನಚಿತ್ರಗೀತೆಗೆ ಮಾತ್ರ ಇವರು ದನಿಯನ್ನು ಸೀಮಿತಗೊಳಿಸಿಲ್ಲ. ಭಾವಗೀತೆ, ಭಕ್ತಿಗೀತೆ, ಭಜನೆ, ಜನಪದಗೀತೆ, ಸೂಫಿ ಹಾಡಿನಲ್ಲೂ ಪ್ರವೀಣೆ. ಕನ್ನಡ, ಹಿಂದಿ, ತುಳು, ತೆಲುಗು, ಲಂಬಾಣಿ ಸೇರಿದಂತೆ ಅನೇಕ ಭಾಷೆಗಳ ಹಾಡಿನ ಕ್ಯಾಸೆಟ್‌ಗಳಿಗೆ ದನಿಗೂಡಿಸಿದ್ದು ಈ ಪ್ರತಿಭೆಯ ಹೆಗ್ಗಳಿಕೆ.
ಬೆಂಗಳೂರಿನಲ್ಲಿ ನಡೆದ ಯುವಸೌರಭ, ಬೆಂಗಳೂರು ಆಕಾಶವಾಣಿ, ಕನ್ನಡ ಸಂಸ್ಕೃತಿ ಇಲಾಖೆ, ಅನೇಕ ಅವಾರ್ಡ್ ಸಮಾರಂಭ, ಸೇರಿದಂತೆ ಪ್ಯಾರೀಸ್, ನೆದರ್‌ಲೆಂಡ್, ದೆಹಲಿ, ಹೈದರಾಬಾದ್, ಚೆನೈ, ಬೆಂಗಳೂರು ಸೇರಿದಂತೆ ರಾಷ್ಟ್ರಾದ್ಯಂತ ಅನೇಕ ಕಡೆಗಳಲ್ಲಿ ಗಾನಲಹರಿ ಬೀರಿಹರು. ಹರಿಹರನ್, ಕುಮಾರ್‌ಸಾನು, ಹಿಮೇಶ್, ಶಿವಮಣಿ ಕುನಾಲ್ ಗಂಜವಾಲ, ಎಸ್.ಪಿ.ಬಿ, ವಿಜಯ್‌ಪ್ರಕಾಶ್, ಗುರುಕಿರಣ್ ಸೇರಿದಂತೆ ಅನೇಕ ಸಂಗೀತ ದಿಗ್ಗಜರ ಜೊತೆ ಹಾಡಿದ ಅನುಭವವೂ ಸಿಂಚನಾರದ್ದು. ಇವರ ಸಾಧನೆಯನ್ನು ಗಮನಿಸಿ ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ನಾನು ಕನ್ನಡದ ಹುಡುಗಿ. ಇನ್ನೂ ಕನ್ನಡ  ಚಲನಚಿತ್ರದಲ್ಲಿ ಹಾಡಬೇಕೆಂಬ ಆಸೆ ನನ್ನದು ಎನ್ನುವ ಸಿಂಚನ್ ದೀಕ್ಷಿತ್ ಅವರನ್ನು ಕನ್ನಡ ಚಿತ್ರರಂಗವೂ ಬಳಸಿದರೆ ಉತ್ತಮ ಗಾಯಕಿಯನ್ನು ಪರಿಚಯಿಸಿದಂತಾಗುತ್ತದೆ.
                                                      



                                                      ಇತೀ ತಮ್ಮ ವಿಶ್ವಾಸಿ,
                                                      ನವೀನ್ ಭಟ್,ಇಳಂತಿಲ
                                                 






Comments

Popular posts from this blog