ಪುತ್ತೂರ ಹುಡುಗಿಯ ಸಾಧನೆ ಹತ್ತೂರು ಮೆಚ್ಚುವಂತದ್ದು
ಹಾವು ಎಂದರೆ ಅಬ್ಬಾ..! ಎಂದು ಹೇಳೋರೇ ಹಲವರು. ಆದರೆ ಈ ಹುಡುಗಿ ಎಲ್ಲರಿಗಿಂತಲೂ ಬಿನ್ನ. ತನ್ನ ಚಿಕ್ಕ ವಯಸ್ಸಲ್ಲೇ ಹಾವು ಈಕೆಯ ಪ್ರಿಯ ಮಿತ್ರ. ಮೈಕ್ ಹಿಡಿದು ಹಾಡು ಎಂದರೆ ಅದಕ್ಕೂ ಓ.ಕೆ. ಭರತನಾಟ್ಯ ತುಂಬಾನೇ ಸಲೀಸು. ನಟನೆಗೂ ಸೈ. ಅಂದ ಹಾಗೆ ಈ ಸರ್ಪ ಸುಂದರಿಯ ಹೆಸರು ಹಸ್ತಾ ಐತಾಳ್.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಾಸಿಸುವ ಉರಗ ತಜ್ಞ ಡಾ. ರವೀಂದ್ರನಾಥ ಐತಾಳ್ ಮತ್ತು ಶ್ರೀಮತಿ ವಸಂತಿ ದಂಪತಿಯರ ಪುತ್ರಿಯಾದ ಹಸ್ತಾಳಿಗೆ ಹಾಡು ಎಂದರೆ ಪ್ರಿಯ ಕ್ಷೇತ್ರ. ತನ್ನ ಹಸ್ತದಿಂದ ಮೈಕ್ ಹಿಡಿದು ಹಾಡಿದಳೆಂದರೆ ಸಾಕು ಚಪ್ಪಾಳೆಗಳ ಸುರಿಮಳೆ..! ಮುಖದಲ್ಲಿ ಪುಟ್ಟ ಪುಟ್ಟ ಮುಗುಳ್ನಗೆಯೊಂದಿಗೆ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾ, ಹುಚ್ಚೆಂದು ಕುಣಿಸುವ ಹಾಡಿನ ಪರಿ ಈ ಪ್ರತಿಭೆಯಲ್ಲಿದೆ.
ಏಳನೇ ವಯಸ್ಸದಲ್ಲೇ ಸುಗಮ ಸಂಗೀತದ ಜಾಡನ್ನು ಹಿಡಿದ ಹಸ್ತಾಳ ಗುರುಗಳು ಕಿರಣ್ ಕುಮಾರ್. ಶಾಸ್ತ್ರೀಯ ಸಂಗೀತವನ್ನು ಸ್ವರ್ಣಲತಾ ಎಂ ಭಟ್ ಅವರಲ್ಲಿ ಕಲಿಕೆ. ಜೊತೆಗೆ ಚಲನಚಿತ್ರ ಗೀತೆಯನ್ನು ಚಂದ್ರಶೇಖರ ಹೆಗ್ಡೆ ಅವರಲ್ಲಿ ಕರಗತ ಮಾಡಿಕೊಂಡಿರುವಳು.
ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದ ಬಾರಿಸು ಕನ್ನಡ ಡಿಂಡಿಮವ ತಂಡದ ಸಕ್ರೀಯ ಪ್ರತಿಭೆಯಾದ ಹಸ್ತಾಳು ಇಲ್ಲಿ ವರೆಗೆ ನೀಡಿದ ಪ್ರದರ್ಶನ ಸುಮಾರು ಐದು ನೂರರ ಸನಿಹ..! ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಲಿಟ್ಲ್ ಸ್ಟಾರ್ ಸಿಂಗರ್ ರಿಯಾಲಿಟೀ ಷೋದಲ್ಲಿ ಭಾಗವಹಿಸಿದ ಈಕೆ ತೀರ್ಪುಗಾರರಾದ ಸಂಗೀತ ಕಟ್ಟಿ, ಮಂಜುಳ ಗುರುರಾಜ್, ಶಶಿಧರ್ ಕೋಟೆ, ಎಲ್ ಎನ್ ಶಾಸ್ತ್ರೀಯವರ ಹೆಗ್ಗಳಿಕೆಗೆ ಪಾತ್ರಳಾದವಳು.ಹಸ್ತಾಳು ವೇದಿಕೆಯಲ್ಲಿ ಹಾವನ್ನು ಕೈಯಲ್ಲಿ ಹಿಡಿದು ಹಾಡಿದ ಪರಿ ನೋಡಿದ ಗಾಯಕ ಎಲ್.ಎನ್ ಶಾಸ್ತ್ರೀ ಅವರು ಸರ್ಪ ಸುಂದರಿ ಎಂದು ಹೊಗಳಿಯೇ ಬಿಟ್ಟರು. ಇಷ್ಟೇ ಅಲ್ಲದೆ ಉದಯ ವಾಹಿನಿಯ ಹಾಡು ಬಾ ಕೋಗಿಲೆ, ಮಂಗಳೂರು ಕರಾವಳಿ ಉತ್ಸವ, ವಿಟ್ಲ ಸಾಹಿತ್ಯ ಸಮ್ಮೇಳನ, ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ, ಬೆಂಗಳೂರು, ಬೀದರ್, ಮಂಗಳೂರು, ಪುತ್ತೂರು, ಉಡುಪಿ, ಸೇರಿದಂತೆ ರಾಜ್ಯಾಧ್ಯಂತ ಈಕೆಯ ಪ್ರತಿಭೆ ಅನಾವರಣ ಗೊಂಡಿದೆ.
ಶಾಸ್ತ್ರೀಯ ಕಲೆ ಭರತನಾಟ್ಯವನ್ನು ವಿದ್ವಾನ್ ದೀಪಕ್ ಕುಮಾರ್ ಅವರಲ್ಲಿ ಕಲಿತು ಜ್ಯೂನಿಯರ್ ಗ್ರೇಡನ್ನು ಪೂರ್ಣಗೊಳಿಸಿಹಳು. ಅಲ್ಲದೆ ಜನಪದ ನೃತ್ಯವನ್ನು ಪ್ರಶಾಂತ್ ನೇರಳಕಟ್ಟೆ ಅವರ ಗರಡಿಯಲ್ಲಿ ಪಳಗುತ್ತಿರುವ ಹಸ್ತಾಳು ನಮ್ಮ ಟಿ.ವಿ, ವಿ-೪ ವಾಹಿನಿ ಸೇರಿದಂತೆ ಅನೇಕ ಕಡೆಗಳಲ್ಲಿ ನಿರೂಪಣೆ ಮಾಡಿ ಮಿಂಚಿರುವಳು. ನಟನಾ ಕ್ಷೇತ್ರದಲ್ಲೂ ತಾನೇನೂ ಕಮ್ಮಿ ಇಲ್ಲ ಎಂಬಂತೆ ಕುಡ ತೆಲಿಪುಗ ಎಂಬ ತುಳು ಧಾರಾವಾಹಿಯಲ್ಲಿ ನಟಿಸಿದ ಅನುಭವ ಈಕೆಗಿದೆ.
ಸಾಮಾಜಿಕವಾಗಿಯೂ ತನ್ನನ್ನು ಗುರುತಿಸಿಕೊಂಡಿರುವ ಹಸ್ತಾಳು ತನ್ನ ತಂದೆ ಹಾವಿನ ಬಗೆಗೆ ನೀಡುವ ಉಪನ್ಯಾಸ ಹಾವು ನಾವು ಮತ್ತು ಪರಿಸರ ಎಂಬ ಉಪನ್ಯಾಸದಲ್ಲಿ ತನ್ನನ್ನು ತೊಡಗಿಸಿಹಳು. ಅಲ್ಲದೆ ಸೂರ್ಯ ವಾಹಿನಿ, ಸನ್ ವಾಹಿನಿ, ಉದಯ ವಾಹಿನಿ, ಸುವರ್ಣ ೨೪*೭ ವಾಹಿನಿ, ಮನೋರಮಾ ಸೇರಿದಂತೆ ರಾಜ್ಯಾದ್ಯಂತ ಹಲವಾರು ಉಪನ್ಯಾಸ ನೀಡಿರುವ ಅನುಭವ ಈ ಪುಟ್ಟ ಪೋರಿಗಿದೆ.
ಓದಿನಲ್ಲೂ ಸದಾ ಮುಂದಿರುವ ಹಸ್ತಾ ತನ್ನ ಎಸ್‌ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ ೯೬.೪ ಅಂಕ ಗಿಟ್ಟಿಸಿಹಳು. ರಾಷ್ಟ್ರಮಟ್ಟ ಆಯೋಜಿಸುವ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಈಕೆಗೆ ರಾಜ್ಯಕ್ಕೆ ೧೭ ನೇ ರ್‍ಯಾಂಕ್ ಬಂದಿರುತ್ತದೆ. ಅಲ್ಲದೆ ರಾಜ್ಯಮಟ್ಟದ ಸಂಸ್ಕೃತ ಪರೀಕ್ಷೆಯಲ್ಲಿ ೯೯.೯ ಅಂಕ ಗಳಿಸಿ ಸಂಸ್ಕೃತ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿದ್ದಾಳೆ.ಎನ್. ಸಿ. ಸಿ ಶಿಬಿರದಲ್ಲಿ ಸಕ್ರೀಯಳಾಗಿರುವ ಹಸ್ತಾಳು ಎ ಗ್ರೇಡ್ ಪೂರ್ಣಗೊಳಿಸಿರುವಳು. ಸಾಹಿತ್ಯ ವಲಯದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಈಕೆಗೆ ಅರಳು ಮಲ್ಲಿಗೆ, ಸುಮ ಸೌರಭ, ಪ್ರತಿಭಾ ದೀಪ, ಕಲಾ ಕುಸುಮ, ಸಿ.ವಿ ವೆಂಕಟಪ್ಪ ಪ್ರಶಸ್ತಿಗಳು ಸೇರಿದಂತೆ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ವತಿಯಿಂದ ಗೌರವಗಳೂ ಸಂದಿದೆ.
ಪ್ರಸ್ತುತ ಪುತ್ತೂರು ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿಜ್ಞಾನ ವೀಭಾಗದಲ್ಲಿ ಅಭ್ಯಸಿಸುವ ಹಸ್ತಾಳಿಗೆ ಭವಿಷ್ಯದಲ್ಲಿ ವೈದ್ಯೆಯಾಗಬೇಕೆಂಬ ಆಸೆಯಂತೆ.
ಇತೀ ತಮ್ಮ ವಿಶ್ವಾಸಿ,
ನವೀನ್ ಭಟ್,ಇಳಂತಿಲ
ವಿಳಾಸ-
ನವೀನ್ ಭಟ್.ಇಳಂತಿಲ
ಹತ್ತೊಕ್ಲು ಮನೆ
ಇಳಂತಿಲ ಪೋಸ್ಟ್
ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ನಂ-೯೮೪೪೬೩೮೫೪೫
Comments
Post a Comment